
ಜಮಖಂಡಿ:ಮಾ.18:ತಾಲೂಕಿನ ಮೈಗೂರ ಗ್ರಾಮದ ಬಳಿ ಹರಿಯುವ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಯುವಕನೋರ್ವನು ಮುಳುಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತ ಯುವಕನನ್ನು 19 ವರ್ಷದ ನಿಂಗರಾಜ ಸದಾಶಿವ ಪಾಟೀಲ ಎಂದು ಗುರುತಿಸಲಾಗಿದೆ. ಈಜುವ ವೇಳೆ ಆಳವಾದ ನೀರಿಗೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಎನ್.ಪಿ. ಹುಗಾರ, ತಿಪ್ಪನ್ನ ಬಂಡಾರಿ, ಕೆ.ಬಿ. ಮುಲ್ಲಾ, ಶ್ರೀಧರ್ ಮಾಳಶೆಟ್ಟಿ, ಕುಮಾರ ದೋಡಮನಿ, ಎಸ್.ಎಸ್. ವಾಜಂತ್ರಿ, ಸೋಮಶೇಖರ ಕುಂಬಾರ, ಶ್ರೀಶೈಲ ಹಿರೆಮಠ ಹಾಗೂ ಅಪ್ಪಾ ಟೋನಿ ಅವರ ನೇತೃತ್ವದ ತಂಡ ನದಿಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದರು.
ಇದಾದ ಬಳಿಕ ಎಂ.ಎ. ವಾಲೇಕಾರ ಸಿಬ್ಬಂದಿ ಪರಶುರಾಮ ಮಾದರ ಅವರೊಂದಿಗೆ ಪೆÇಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಈ ಘಟನೆ ಗ್ರಾಮದಲ್ಲಿ ಶೋಕಮಯ ವಾತಾವರಣವನ್ನು ನಿರ್ಮಿಸಿದೆ. ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.



























