ಟ್ರ್ಯಾಕ್ಟರ್ – ಬಸ್ ಡಿಕ್ಕಿ: ಹಲವರಿಗೆ ಗಾಯ

ಜೇವರಗಿ,ಡಿ.17: ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತಾರು ಜನರಿಗೆ ಗಂಭೀರವಾಗಿ ಗಾಯಗಳಾದ ಘಟನೆ ಮಂಗಳವಾರ ಸಂಜೆ ತಾಲ್ಲೂಕಿನ ನೆಲೋಗಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಟ್ರ್ಯಾಕ್ಟರ್ ಚಾಲಕನಿಗೆ ಗಾಯಗಳಾಗಿದ್ದು, ಕೆಲವರಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಬಸ್ ಹಾಗೂ ಟ್ರ್ಯಾಕ್ಟರ್ ತೆರವುಗೊಳಿಸುವಲ್ಲಿ ವಿಳಂಬವಾದ ಕಾರಣ ಹತ್ತಾರು ಕಿ.ಮೀ. ವರೆಗೆ ವಾಹನಗಳು ನಿಂತು ಸಂಚಾರ ದಟ್ಟಣೆ ಉಂಟಾಯಿತು. ವಿಜಯಪುರ ಹಾಗೂ ಕಲಬುರಗಿ ಕಡೆ ತೆರಳುತ್ತಿದ ಪ್ರಯಾಣಿಕರು ಐದಾರು ಗಂಟೆಗಳ ಕಾಲ ರಸ್ತೆಮೇಲೆ ಕಳೆಯುವಂತಾಯಿತು.
ಘಟನಾ ಸ್ಥಳಕ್ಕೆ ನೆಲೋಗಿ ಪಿಎಸ್‍ಐ ಚಿದಾನಂದ ಸವದಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಅಪಘಾತದಲ್ಲಿ ಜಖಂಗೊಂಡ ಬಸ್ ಹಾಗೂ ಟ್ರ್ಯಾಕ್ಟರ್‍ನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಘಟನೆ ಕುರಿತು ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.