ಶಾಸಕರು ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನಿಲ್ಲ:ರಾಮಲಿಂಗಾರೆಡ್ಡಿ

ಕಲಬುರಗಿ,ಫೆ.13-ಶಾಸಕರು ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿರುವುದನ್ನು ಸಮರ್ಥಿಸಿಕೊಂಡರು.
ರಾಹುಲ್ ಗಾಂಧಿ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಬಿಜೆಪಿ ಆಗ್ರಹ ಪಡಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಕೇಂದ್ರದ ವಿರುದ್ಧ ಮಾತನಾಡಿದ್ದಾರೆ. ಅವರ ವಿರುದ್ಧ ಏಕೆ ಮಾತನಾಡಬಾರದು ? ರಾಜೀವ್ ಗಾಂಧಿ ಅವರು ಸತ್ತು ಎಷ್ಟು ವರ್ಷವಾಯಿತು ಆದರೂ ಅವರ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಅಂತ ಬಿಂಬಿಸುತ್ತಿದ್ದರು ಈಗ ಏನಾಯಿತು ಎಂದು ಪ್ರಶ್ನಿಸಿದರು.
ಪ್ರಧಾನಿ ಅವರ ಮೇಲೆ ಎಷ್ಟೊಂದು ಆರೋಪ ಕೇಳಿ ಬರುತಾ ಇವೆ, ಬಿಜೆಪಿಯವರು ಇವಾಗ ಏನು ಹೇಳುತ್ತಾರೆ ಎಂದರು.
ಗಾಣಗಾಪುರ ಕ್ಷೇತ್ರ ಅಭಿವೃದ್ಧಿ ಆಗಬೇಕು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ. ಶಾಸಕರು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ. ಗಾಣಗಾಪುರ ದೇವಸ್ಥಾನದ ಮಾಸ್ಟರ್ ಪ್ಲಾನ್ ರೆಡಿ ಮಾಡಲಾಗಿದೆ ಎಂದು ತಿಳಿಸಿದರು.