
ಬೆಂಗಳೂರು, ಮಾ. ೨೪- ಬೆಂಗಳೂರಿನ ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಮುಚ್ಚುವ ಬಗ್ಗೆಯಾಗಲೀ, ಅದನ್ನು ಬೇರೆಡೆಗೆ ವರ್ಗಾಯಿಸುವ ಬಗ್ಗೆಯಾಗಲೂ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ನಿಯಮ-೬೯ರ ಅಡಿ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಮುಚ್ಚಲಾಗುತ್ತಿದೆ. ಇದರ ಹಿಂದೆ ಉನ್ನತ ಸ್ಥಾನದಲ್ಲಿರುವವರು ಇದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಮಣಿದು ಸರ್ಕಾರ ದೇಶದ ಪ್ರತಿಷ್ಠಿತ ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಮುಚ್ಚಲಾಗುತ್ತಿದೆ. ಇದನ್ನು ಉಳಿಸಬೇಕು ಎಂದು ಒತ್ತಾಯಿಸಿದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಮುಚ್ಚುವ ಬಗ್ಗೆಯಾಗಲೀ, ವರ್ಗಾಯಿಸುವ ಬಗ್ಗೆಯಾಗಲೀ ಯಾವುದೇ ಪ್ರಸ್ತಾವನೆ ಬಂದಿಲ್ಲ.
ಈ ಜಾಗವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ವಿಚಾರವೂ ಇಲ್ಲ. ಈ ಹಿಂದೆ ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಆ ಕ್ಷೇತ್ರದ ಶಾಸಕರು, ಈಗ ಸಚಿವರೂ ಆಗಿರುವ ಕೃಷ್ಣಬೈರೇಗೌಡ ಅವರು ಏನು ನಿಲುವು ವ್ಯಕ್ತಪಡಿಸಿದ್ದಾರೋ ಅದೇ ನಿಲುವು ಎಲ್ಲರದ್ದಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ವಿಮಾನ ತರಬೇತಿ ಶಾಲೆ ಮುಚ್ಚಬೇಡಿ
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಇಡೀ ದೇಶದಲ್ಲೇ ಮೊದಲ ವಿಮಾನ ತರಬೇತಿ ಶಾಲೆಯಾದ ಜಕ್ಕೂರಿನ ಮೇಲೆ ಉಪಮುಖ್ಯಮಂತ್ರಿ ಕಣ್ಣು ಬಿದ್ದಂತಿದೆ. ಸುಮಾರು ೩೦೦ ಎಕರೆ ಜಾಗವನ್ನು ಪಿಪಿಪಿ ಮಾದರಿಯಲ್ಲಿ ಎಕ್ಸಿಕ್ಯೂಟಿವ್ ಕ್ಲಬ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈ ಶಾಲೆಯನ್ನು ವರ್ಗಾಯಿಸುವ ಬಗ್ಗೆ ಅಧಿಕಾರಿಗಳ ಸಭೆಯು ನಡೆದಿದೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಸಚಿವ ಕೃಷ್ಣಬೈರೇಗೌಡ ಅವರು ಜಕ್ಕೂರು ವೈಮಾನಿಕ ಶಾಲೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ, ಇದೊಂದು ದೊಡ್ಡ ಹಗರಣ ಎಂದೆಲ್ಲಾ ಹೇಳಿದ್ದರು. ಈಗ ಅವರು ಆಡಳಿತ ಪಕ್ಷಕ್ಕೆ ಪ್ಲೈ ಆಗುತ್ತಿದ್ದಂತೆಯೇ ಪ್ಲೈಯಿಂಗ್ ಸ್ಕೂಲ್‌ನ್ನು ಪ್ಲೈ ಮಾಡಲಾಗುತ್ತಿದೆ ಎಂದು ದೂರಿದ್ದರು.
ಈ ವೈಮಾನಿಕ ಶಾಲೆಗೆ ಅಂದಿನ ಮಹಾರಾಜರು ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿ ನೀಡಿದ್ದರು. ಈ ವೈಮಾನಿಕ ಶಾಲೆಗೆ ಅಂದಿನ ಪ್ರಧಾನಿ ನೆಹರು ರವರು ಶಿಲಾನ್ಯಾಸ ಮಾಡಿದ್ದರು. ನೆಹರು ರವರು ಹಾಕಿದ್ದ ಅಡಿಗಲ್ಲನ್ನೆ ಈ ಸರ್ಕಾರ ಕಿತ್ತು ಹಾಕುವ ಪ್ರಯತ್ನ ನಡೆಸಿದೆ. ಇದು ಸರಿಯಲ್ಲ. ಜಕ್ಕೂರು ವೈಮಾನಿಕ ಶಾಲೆಯನ್ನು ಮುಚ್ಚಿ ಆ ಭಾಗದಲ್ಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲು ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ದೂರಿದ್ದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಇಂಧನ ಸಚಿವ ಜಾರ್ಜ್ ಅವರು, ಜಕ್ಕೂರು ಶಾಲೆಯನ್ನು ಬೇರೆ ಕಡೆಗೆ ವರ್ಗಾಯಿಸಿ ಆ ಜಾಗದಲ್ಲಿ ಒಂದು ಕ್ರೀಡಾ ಸಂಕೀರ್ಣವನ್ನು ನಿರ್ಮಿಸಬೇಕು ಎಂದು ನಾನೇ ಪತ್ರ ಬರೆದಿದ್ದೆ. ಆದರೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿಲ್ಲ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕ್ರೀಡಾ ಸಂಕೀರ್ಣ ಮಾಡುವುದಾದರೆ ಬೇರೆಡೆ ಮಾಡಿ. ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚಿ ಕ್ರೀಡಾ ಸಂಕೀರ್ಣ ಮಾಡುವ ಅಗತ್ಯವೇನಿದೆ. ಇದರ ಹಿಂದೆ ಉನ್ನತ ಸ್ಥಾನದಲ್ಲಿರುವವರ ಲಾಬಿ ಇದೆ. ರಾಜಸ್ಥಾನದಿಂದ ಅಭಿವೃದ್ಧಿ ಮಾಡಲು ಜನ ಬರುತ್ತಾರಂತೆ. ನಮಗೂ ಎಲ್ಲವೂ ಗೊತ್ತಿದೆ ಎಂದು ಹೇಳಿ, ಉಪಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ಇಷ್ಟೆಲ್ಲಾ ಲಾಬಿ ನಡೆದಿರುವುದು ನಿಜಕ್ಕೂ ಆಶ್ಚರ್ಯ ಎಂದು ಹೇಳಿದಾಗ, ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸುನೀಲ್‌ಕುಮಾರ್ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಕ್ಷಿಪಣಿಗಳಿಗೆ ಸಿಗದ ಈ ರಾಡರ್ ಯಾರದ್ದು, ಆ ತಂತ್ರಜ್ಞಾನ ನಮಗೂ ಬೇಕು ಎಂದು ಹೇಳಿದರು.
ಏನೇ ಇರಲಿ, ಜಕ್ಕೂರು ವೈಮಾನಿಕ ತರಬೇತಿ ಶಾಲೆ ಉಳಿಸಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದರು.





























