Home ಜಿಲ್ಲೆ ಬೆಂಗಳೂರು ರೋಡ್ ರೇಜ್ ಪ್ರಕರಣಗಳಿಗೆ ಕ್ಷಮೆಯಿಲ್ಲ

ರೋಡ್ ರೇಜ್ ಪ್ರಕರಣಗಳಿಗೆ ಕ್ಷಮೆಯಿಲ್ಲ

ಬೆಂಗಳೂರು,ಏ.೭- ನಿರ್ಲಕ್ಷ್ಯದ ಚಾಲನೆಗೆ (ರೋಡ್ ರೇಜ್) ಯಾವುದೇ ಕ್ಷಮೆಯಿರುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್ ಉದ್ದೇಶ ಪೂರ್ವಕವಾಗಿ ದ್ವಿಚಕ್ರವಾಹನದ ಕಡೆ ಕಾರನ್ನು ತಿರುಗಿಸಿ ಅಪಘಾತವೆಸಗಿದ ಆರೋಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವಿರುದ್ಧ ಪೊಲೀಸರು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ರದ್ದಪಡಿಸಲು ನಿರಾಕರಿಸಿದೆ.


ತಮ್ಮ ವಿರುದ್ಧದ ಕೊಲೆ ಯತ್ನ ಪ್ರಕರಣ ರದ್ದತಿ ಕೋರಿ ಕೊಡಿಗೆಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಸುಕೃತ್ ಕೇಶವ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಅರ್ಜಿಯನ್ನು ತಿರಸ್ಕರಿಸಿತು. ಅಲ್ಲದೇ,ನಗರ ಸಂಚಾರ ದಟ್ಟಣೆಯು ತಾಳ್ಮೆಯನ್ನು ಕಲಿಸಲಿದೆ. ಆದರೆ, ನಿಮಗೆ(ಅರ್ಜಿದಾರ) ಅದು ಇರಬೇಕು ಎಂದು ಮೌಖಿಕವಾಗಿ ತಿಳಿಸಿತು.


ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಅವರು ಕಚೇರಿಗೆ ಹೋಗುತ್ತಿದ್ದರು. ಅಪಘಾತ ನಡೆಸಬೇಕು ಎಂಬ ಯಾವುದೇ ಉದ್ದೇಶ ಅವರಿಗಿರಲಿಲ್ಲ. ಆದರೆ, ಎಫ್‌ಐಆರ್ ನಲ್ಲಿ ತಪ್ಪಾಗಿ ಕೊಲೆ ಯತ್ನ ಆರೋಪ ದಾಖಲಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.


ಸಂಚಾರ ದಟ್ಟಣೆ ತಾಳ್ಮೆ:
ಆಗ ಪೀಠವು ಮೊದಲು ಬಿಎನ್‌ಎಸ್ ಸೆಕ್ಷನ್ ೧೦೯ (ಕೊಲೆ ಯತ್ನ) ಇರಲಿಲ್ಲ. ಆಮೇಲೆ ಅನುಮತಿ ಪಡೆದು ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಬನ್ನಿ, ರೋಡ್ ರೇಜ್ ಪ್ರಕರಣದಲ್ಲಿ ದುರುದ್ದೇಶವೇನು ನೋಡಬೇಕು ಎಂದಿತು.


ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಸಾಫ್ಟ್ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡೋಕೆ ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಅದು ಇರಬೇಕು. ರೋಡ್ ರೇಜ್‌ಗೆ ಕ್ಷಮೆಯೇ ಇಲ್ಲ ಎಂದು ತಿಳಿಸಿತು. ಅಲ್ಲದೆ, ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಅರ್ಜಿದಾರರು ಮತ್ತೊಮ್ಮೆ ಅದನ್ನು ಪ್ರಶ್ನಿಸಿ ಬರಬಹುದು. ಆ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಿ, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.


ಪ್ರಕರಣದ ಹಿನ್ನೆಲೆ:
ಕಳೆದ ೨೦೨೫ರ ಅಕ್ಟೋಬರ್ ೨೬ರಂದು ಅಂಕಿತಾ ಪಾಟೀಲ್ ಮತ್ತು ವಿನೇಶ್ ದಂಪತಿಯು ಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಪುತ್ರ ಕಲ್ಪ ಜೈನ್ ಕೂರಿಸಿಕೊಂಡು ತಿಂಡ್ಲುವಿನಿಂದ ಇಂದಿರಾನಗರಕ್ಕೆ ಹೊರಟಿದ್ದರು. ಎಂ ಎಸ್ ರಾಮಯ್ಯ ಆಸ್ಪತ್ರೆಯ ಸಿಗ್ನಲ್ ಬಳಿ ಅರ್ಜಿದಾರ ಸುಕೃತ್ ಕೇಶವ್ ಗೌಡ ಅವರ ಕೆಂಪು ಬಣ್ಣದ ಟಾಟಾ ಕರ್ವ್ ಕಾರು ನಿಂತಿತ್ತು. ಈ ವೇಳೆ, ಸಿಗ್ನಲ್ ಬಿಟ್ಟಿದ್ದರೂ ಕಾರು ನಿಂತಲ್ಲಿಯೇ ನಿಂತಿತ್ತು. ಇದರಿಂದ ವಿನೀಶ್ ಹಾರ್ನ್ ಮಾಡಿ, ಮುಂದೆ ಹೋಗಲು ಸಲಹೆ ನೀಡಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರ, ವಿನೀಶ್ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದು ಅಜಾಗರೂಕತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದನು.


ಪ್ರಕರಣ ದಾಖಲು:
ಇದರಿಂದ ಸ್ಕೂಟರ್‌ನಲ್ಲಿದ್ದವರೆಲ್ಲರೂ ಕೆಳಗೆ ಬಿದ್ದು ಚಾಲಕ ವಿನೇಶ್‌ಗೆ ಎಡಭಾಗದ ರಿಬ್ಸ್‌ಗೆ ಪೆಟ್ಟಾಗಿತ್ತು. ಈ ಸಂಬಂಧ ಸದಾಶಿವನಗರ ಸಂಚಾರ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ ೨೮೧,೧೨೫(ಎ) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್‌ಗಳಾದ ೧೩೪ (ಎ ಮತ್ತು ಬಿ) ಮತ್ತು ೧೮೭ರ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಕೃತ್ಯವು ಸದಾಶಿವನಗರ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಕ್ಷಮ ನ್ಯಾಯಾಲಯ ಮತ್ತು ಅಧಿಕಾರಿಗಳ ಅನುಮತಿ ಪಡೆದು ಪ್ರಕರಣವನ್ನು ಸದಾಶಿವನಗರ ಸಂಚಾರ ಠಾಣೆಯ ಪೊಲೀಸರು ಸದಾಶಿವನಗರ ಠಾಣೆಗೆ ಪ್ರಕರಣ ವರ್ಗಾಯಿಸಿದ್ದರು. ಇದನ್ನು ಆಧರಿಸಿ ಸದಾಶಿವನಗರ ಠಾಣೆಯ ಪೊಲೀಸರು ಬಿಎನ್‌ಎಸ್ ಸೆಕ್ಷನ್ ೧೦೯(೧) ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದಾರೆ.