
ಬೆಂಗಳೂರು, ಸೆ. ೬- ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದ್ದು, ಒಳ ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡಿದ್ದಾರೆ. ಒಳ ಮೀಸಲಾತಿ ಜಾರಿ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಹಾಗೂ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಪಾಲನೆಯಾಗಿಲ್ಲ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಪರಿಶಿಷ್ಟ ಸಮುದಾಯದ ಒಳ ಮೀಸಲಾತಿ ಹಂಚಿಕೆ ಸರಿಯಿಲ್ಲ. ಸರ್ಕಾರ ಕೂಡಲೇ ಒಳ ಮೀಸಲಾತಿ ಹಂಚಿಕೆಯನ್ನು ಸರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಪರಿಶಿಷ್ಟ ಸಮುದಾಯಗಳ ೧೦೧ ಜಾತಿಗಳಲ್ಲಿ ತಳಮಟ್ಟದಲ್ಲಿರುವವರೇ ಅಲೆಮಾರಿಗಳು. ಈ ಸಮುದಾಯಗಳಿಗೆ ಒಳ ಮೀಸಲಾತಿ ಹಂಚಿಕೆಯಿಂದ ಅನ್ಯಾಯವಾಗಿದೆ. ಹಾಗೆಯೇ ಎ.ಕೆ., ಏ.ಡಿ. ವರ್ಗಗಳಿಗೂ ಸರ್ಕಾರ ಅನ್ಯಾಯ ಮಾಡಿದೆ. ಒಳಮೀಸಲಾತಿಯಲ್ಲಿ ಸಂಪೂರ್ಣ ಗೊಂದಲವನ್ನು ಸೃಷ್ಠಿ ಮಾಡಿದೆ ಎಂದು ದೂರಿದರು.
ಒಳಮೀಸಲಾತಿ ಸಂಬಂಧ ಈ ಹಿಂದೆ ವರದಿ ಕೊಟ್ಟದ್ದ ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ಹಾಗೂ ನ್ಯಾ. ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸುಗಳನ್ನೆಲ್ಲಾ ಗಾಳಿಗೆ ತೂರಿದೆ. ಜತೆಗೆ ಸುಪ್ರೀಂ ಕೋರ್ಟ್ ಆದೇಶದ ಪಾಲನೆಯನ್ನು ಮಾಡಿಲ್ಲ. ಈ ಮೂಲಕ ಎಸ್ಸಿ ಸಮುದಾಯಗಳಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟರ ಮೀಸಲಾತಿಯನ್ನು ಶೇ. ೧೭ಕ್ಕೆ ಹೆಚ್ಚಿಸಲಾಯಿತು. ಇದಕ್ಕೆ ಹಲವರ ವಿರೋಧ ಇದ್ದರೂ ನಾವು ಆ ಸಮುದಾಯದ ಪರವಾಗಿ ತೀರ್ಮಾನ ಮಾಡಿದ್ದೆವು. ಈಗ ಶೇ. ೧ ರಷ್ಟು ಹೆಚ್ಚಿಸಿ ಎಲ್ಲರಿಗೂ ನ್ಯಾಯ ಕೊಡುವ ಪ್ರಯತ್ನ ಮಾಡುವಿರಾ ಎಂದು ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ರಾಜಕೀಯ ನಿರ್ಣಯ ಕೈಗೊಳ್ಳುವುದಾದರೆ ಆಯೋಗಗಳನ್ನು ಏಕೆ ಮಾಡಬೇಕಿತ್ತು ಅವರು ಪ್ರಶ್ನಿಸಿದರು.
ಒಳ ಮೀಸಲಾತಿ ಹಂಚಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ನಡೆ ಇಟ್ಟಿದೆ. ಒಳಮೀಸಲಾತಿ ಹಂಚಿಕೆ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನ್ಯಾಯಾಲಯಕ್ಕೆ ಹೋಗಿ ಎನ್ನುತ್ತಿದ್ದಾರೆ. ಸಮುದಾಯಗಳ ಬಗ್ಗೆ ಜಗಳ ಹಚ್ಚುವ ಅಪಖ್ಯಾತಿ ಸಿದ್ದರಾಮಯ್ಯನವರ ಮೇಲೆ ಬರಲಿದೆ ಎಂದರು.
ಸುಪ್ರೀಂ ಕೋರ್ಟ್ ೨೦೨೪ರ ಡಿಸೆಂಬರ್‌ನಲ್ಲಿ ಒಳಮೀಸಲಾತಿ ಕುರಿತಂತೆ ನೀಡಿರುವ ತೀರ್ಪಿನಲ್ಲಿ ಅಸಮಾನರನ್ನು ಪ್ರಬಲರ ಜತೆ ಸೇರಿಸಿ ಮೀಸಲಾತಿ ಹಂಚಬಾರದು ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರ ಶೇ. ೬, ಶೇ. ೫ ಹೀಗೆ ಒಳಮೀಸಲಾತಿ ಹಂಚಿಕೆ ಮಾಡಿ ಕೈ ಬಿಟ್ಟಿದೆ ಎಂದು ಅಸಮಾಧಾನ ಹೊರ ಹಾಕಿದರು.
ಸರ್ಕಾರ ಕೂಡಲೇ ಒಳಮೀಸಲಾತಿ ಹಂಚಿಕೆಯನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಅನ್ಯಾಯಕ್ಕೆ ಒಳಗಾದ ಸಮುದಾಯಗಳ ಜತೆ ಬಿಜೆಪಿ ನಿಲ್ಲಲಿದೆ. ನಾವು ಕಾನೂನು ಸೇರಿದಂತೆ ಎಲ್ಲ ಹೋರಾಟಕ್ಕೂ ಸಿದ್ದರಿದ್ದೇವೆ. ಒಳಮೀಸಲಾತಿ ಹಂಚಿಕೆ ಸರಿಯಾಗಬೇಕು. ಇದು ನಮ್ಮ ಬೇಡಿಕೆ. ಹಾಗೆಯೇ ನ್ಯಾ. ನಾಗಮೋಹನ್‌ದಾಸ್ ಆಯೋಗ ನೀಡಿರುವ ವರದಿ ಯಥಾವತ್ತಾಗಿ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.
ಇವಿಎಂಗಳ ಮೇಲೆ ನಂಬಿಕೆ ಇರದಿದ್ದರೆ ರಾಜೀನಾಮೆ ನೀಡಲಿ
ಚುನಾವಣೆಗಳಲ್ಲಿ ಮತಪತ್ರಗಳ ಬಳಕೆ ಸಂದರ್ಭದಲ್ಲಿ ಅಕ್ರಮ, ಗೊಂದಲಗಳು ಆಗುತ್ತಿತ್ತು. ಇದನ್ನು ತಪ್ಪಿಸಲು ವಿದ್ಯುನ್ಮಾನ ಮತಯಂತ್ರಗಳು ಬಂದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿದ್ದೇ ಇವಿಎಂನಿಂದ. ಈಗ ಇವಿಎಂಗಳ ಮೇಲೆ ನಂಬಿಕೆ ಇಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಕಾಂಗ್ರೆಸ್‌ನವರಿಗೆ ೨೦೦೪-೨೦೦೯ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬಳಕೆಗೆ ತಕರಾರು ಮಾಡಲಿಲ್ಲ. ಈಗ ಅಪನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ. ಇವಿಎಂಗಳಲ್ಲಿ ಗೊಂದಲ, ದೋಷ ಇದ್ದರೆ ತೋರಿಸಿ ದಾಖಲೆಗಳನ್ನು ಕೊಡಿ ಎಂದರೂ ಯಾರೂ ಬರಲಿಲ್ಲ. ಈಗ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್‌ಗಳನ್ನು ಅನುಭವದ ಮೇಲೆ ತರುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಯಾವ ಅನುಭವ ಇದೆ ಎಂಬುದನ್ನು ಹೇಳಲಿ ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಶಾಸಕ ಪಿ. ರಾಜೀವ್ ಉಪಸ್ಥಿತರಿದ್ದರು.
ಬೆಂಗಳೂರು ಚಲೋ
ರಾಜ್ಯ ಸರ್ಕಾರ ಜಾರಿಮಾಡಿರುವ ಪರಿಶಿಷ್ಟ ಸಮುದಾಯದ ಒಳ ಮೀಸಲಾತಿಯಲ್ಲಿ ಬಂಜಾರ,ಭೋವಿ, ಕೊರಚ,ಕೊರವ ಮುಂತಾದ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಬಿಜೆಪಿ ಇದೇ ತಿಂಗಳ ೧೦ ರಂದು ಬೆಂಗಳೂರು ಚಲೋ ನಡೆಸಲಿದೆ.
ಒಳ ಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಇದೇ ತಿಂಗಳ ೧೦ ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯ ಪೋಸ್ಟರ್‌ನ್ನು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬಿಡುಗಡೆ ಮಾಡಿದೆ.