Home ಜಿಲ್ಲೆ ಕಲಬುರಗಿ ಕೊಟ್ಟ ಹಣ ಮರಳಿ ಕೇಳಿದಕ್ಕೆ ಶಿಕ್ಷಕಿ ಕೊಲೆ

ಕೊಟ್ಟ ಹಣ ಮರಳಿ ಕೇಳಿದಕ್ಕೆ ಶಿಕ್ಷಕಿ ಕೊಲೆ

ಕಲಬುರಗಿ,ಏ.7-ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಮಹಿಳೆಯನ್ನು ಕಲಬುರಗಿ ನಗರದ ಎಸ್.ಬಿ.ಕಾಲೇಜು ಎದುರಿನ ಆನಂದನಗರ ನಿವಾಸಿಯಾಗಿರುವ, ಭಾಲ್ಕಿ ತಾಲ್ಲೂಕಿನ ವಾಂಜರಖೇಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಜ್ಯೋತಿ ಕಪಾಳೆ ಎಂದು ಗುರುತಿಸಲಾಗಿದೆ.
ಚಿಂಚೋಳಿ ತಾಲ್ಲೂಕಿನ ಭುಂಯಾರ ಗ್ರಾಮದ ಅಮರ ಮಲ್ಲಪ್ಪ ಕುಡಳ್ಳಿ (27) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹಿನ್ನೆಲೆ:
ಅಮರ ಈ ಹಿಂದೆ ಕಲಬುರಗಿಯ ಆನಂದ ನಗರದ ಬಳಿ ನಂದಿನಿ ಪಾರ್ಲರ್ ನಡೆಸುತ್ತಿದ್ದ. ಅಲ್ಲೇ ಶಿಕ್ಷಕಿ ಜ್ಯೋತಿ ಅವರ ಪರಿಚಯವಾಗಿತ್ತು. ಆಗಾಗ ಹಾಲು ಕೊಡಲು ಅಮರ ಜ್ಯೋತಿ ಅವರ ಮನೆಗೆ ಹೋಗುತ್ತಿದ್ದ. ಹೀಗಾಗಿ ಸಲುಗೆ ಬೆಳೆದಿತ್ತು. ಬಳಿಕ ಜ್ಯೋತಿ ಅವರಿಂದ ಅಂದಾಜು 14 ಲಕ್ಷ ಹಣ ಪಡೆದಿದ್ದ ಎನ್ನಲಾಗಿದ್ದು, ಹಣ ಮರಳಿ ಕೊಡುವಂತೆ ಜ್ಯೋತಿ ಅವರು ಕಲಹ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿ ಜ್ಯೋತಿ ಅವರ ಕೊಲೆಗೆ ಸಂಚು ರೂಪಿಸಿದ್ದ. ಏ.3 ರಂದು ಜ್ಯೋತಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಸಾಕ್ಷಿನಾಶ ಪಡಿಸಲು ಶವ ಸುಟ್ಟು ಹಾಕಿದ್ದ ಎಂದು ತಿಳಿದುಬಂದಿದೆ.
ಸಿಪಿಐ ಶಿವಶಂಕರ ಸಾಹು, ಸಿಬ್ಬಂದಿ ಕುಪೇಂದ್ರ, ಮನೋಜ ಸ್ವಾಮಿ, ಹುಸೇನ್ ಪಟೇಲ್, ಸೋಮಶೇಖರ್ ಅವರು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.