
ಪಾವಗಡ, ಆ. ೨೧- ಇಡೀ ಭಾರತದಲ್ಲಿ ಮಹಿಳಾ ಪ್ರಪ್ರಥಮ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ ಎಂದು ಖ್ಯಾತ ಸಾಹಿತಿ ಕೆ.ವಿ. ಲಕ್ಷ್ಮಣಮೂರ್ತಿ ತಿಳಿಸಿದರು.
ಪಟ್ಟಣದ ಶೃಂಗೇರಿಶ್ರೀ ಸರಸ್ವತಿ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ತಾವು ರಚಿಸಿದ ರಾಣಿ ಅಬ್ಬಕ್ಕ ದೇವಿಯ ಜತೆ ಪಯಣ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ ಮಂಗಳೂರಿನ ಉಳ್ಳಾಲದ ಸಂಸ್ಥಾನದ ರಾಣಿ ಅಬ್ಬಕ್ಕದೇವಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. ಇವರ ಮಗಳ ಹೆಸರು ಸಹ ರಾಣಿ ಅಬ್ಬಕ್ಕ ದೇವಿಯಾಗಿದ್ದು, ಇಬ್ಬರು ಸಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದರು.
೨೦೧೯ ರಲ್ಲಿ ಇವರ ಬಗ್ಗೆ ಅಧ್ಯಯನ ಮಾಡಲು ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ಸಂಪೂರ್ಣವಾದ ಮಾಹಿತಿಯನ್ನು ಕಲೆ ಹಾಕಿ, ಅವರ ಜೀವನ ಚರಿತ್ರೆಯನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ರಾಣಿ ಅಬ್ಬಕ್ಕ ದೇವಿಯ ಜತೆ ಪಯಣ ಎಂಬ ಪುಸ್ತಕವನ್ನು ರಚಿಸಿದ್ದು, ಬಿಡುಗಡೆ ಆಗುತ್ತಿರುವುದು ಎಂಟನೇ ಆವೃತ್ತಿಯಾಗಿದೆ ಎಂದು ಹೇಳಿದರು.
ಶೃಂಗೇರಿ ಶ್ರೀ ಸರಸ್ವತಿ ವಿದ್ಯಾ ಪೀಠದ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ಸಾಹಿತಿ ಕೆ.ವಿ. ಲಕ್ಷ್ಮಣಮೂರ್ತಿ ರಚಿಸಿರುವ ರಾಣಿ ಅಬ್ಬಕ್ಕ ದೇವಿ ಜತೆ ಪಯಣ ಎಂಬ ಪುಸ್ತಕ ಅದ್ಬುತವಾಗಿದ್ದು, ಮಕ್ಕಳು ಇಂತಹ ಪುಸ್ತಕಗಳನ್ನು ಓದಿ, ತ್ಯಾಗ ಬಲಿದಾನಗಳ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಅಭ್ಯಾಸ ಮಾಡಿ ನಿಮ್ಮ ಜೀವನದಲ್ಲೂ ದೇಶಪ್ರೇಮವನ್ನು ಮೂಡಿಸಿಕೊಳ್ಳುವಂತೆ ಕರೆ ನೀಡಿದರು.
ಬಹು ಮುಖ್ಯವಾಗಿ ಇಂದಿನ ಮಕ್ಕಳು ಟಿ.ವಿ. ಮೊಬೈಲ್ ನಿಂದ ದೂರ ಇದ್ದು, ದಿನಪತ್ರಿಕೆಗಳು ಮತ್ತು ಸಾಹಿತಿಗಳು ರಚಿಸಿರುವ ಪುಸ್ತಕಗಳನ್ನು ಅಭ್ಯಾಸ ಮಾಡಿ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ಶಿಕ್ಷಕ ಹಾಗೂ ಸಾಹಿತಿ ಬ್ಯಾಡನೂರು ಚೆನ್ನಬಸವಣ್ಣ ಮಾತನಾಡಿ, ಸಾಹಿತಿಗಳು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ವಿ. ಲಕ್ಷ್ಮಣಮೂರ್ತಿಯವರು ರಚಿಸಿದ ರಾಣಿ ಅಬ್ಬಕ್ಕ ದೇವಿಯ ಜತೆಯ ಪಯಣ ಎಂಬ ಪುಸ್ತಕ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕವು ಎಂಟನೇ ಆವೃತ್ತಿಯಾಗಿದ್ದು, ನಮ್ಮ ಶಾಲೆಯಲ್ಲಿ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ದಯಾನಂದ್, ಶಿಕ್ಷಕರಾದ ರಾಕೇಶ್, ನಾಗರಾಜು, ಮೋಹನ್, ಅನಿತಾ, ಮಾಧುರ್ಯ, ರೂಪ, ಕವಿತಾ ಮತ್ತಿತರರು ಪಾಲ್ಗೊಂಡಿದ್ದರು.