
ತುಮಕೂರು.ಆ೨೨: ತಾನು ಓದುವ ಸರಕಾರಿ ಶಾಲೆಗೆ ಕಾಂಪೌಂಡ್ ಕಟ್ಟಿಸಿಕೊಡುವವರೆಗೆ ನಾನು ಶಾಲೆಗೆ ಹೋಗಲ್ಲ ಎಂದು ನಾಲ್ಕನೇ ತರಗತಿ ಬಾಲಕಿಯೊಬ್ಬಳು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಸ್ವತಃ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿದರು. ಈ ವೇಳೆ ಬಾಲಕಿಯ ಮನವೊಲಿಸಲು ನ್ಯಾಯಾಧೀಶರು ಪ್ರಯತ್ನಿಸಿದ್ದಾರೆ. ಆದರೂ ಕೂಡ ಬಾಲಕಿಯು ಶಾಲಾ ಕಾಂಪೌಂಡ್ ನಿರ್ಮಾಣ ಮಾಡಿದ ನಂತರವೇ ಶಾಲೆಗೆ ಹೋಗುವುದಾಗಿ ಪಟ್ಟು ಹಿಡಿದು ಕುಳಿತಿದ್ದಾಳೆ.
ಸಿಎಂ, ಪ್ರಧಾನಿ ಮೋದಿಗೆ ಅಂಚೆ ಪತ್ರ: ಬಾಲಕಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಅವರಿಗೆ ಪ್ರತ್ಯೇಕ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದ್ದಾಳೆ.
ಪತ್ರದಲ್ಲಿ, “ತುಮಕೂರು ಜಿಲ್ಲೆ ಬೆಳಧರ ಸರಕಾರಿ ಶಾಲೆಯಲ್ಲಿ ೪ ನೇ ತರಗತಿ ಓದುತ್ತಿದ್ದೇನೆ. ನಮ್ಮ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಇಲ್ಲದೇ ಇರುವುದರಿಂದ ಬೇರೆಯವರ ಕಾರುಗಳೆಲ್ಲಾ ನಿಲ್ಲುತ್ತಿರುವುದರಿಂದ ನನಗೆ ಆಟದ ಮೈದಾನಕ್ಕೆ ಹೋಗಲು ಭಯವಾಗುತ್ತದೆ. ದಯವಿಟ್ಟು ಕಾಂಪೌಂಡ್ ಕಟ್ಟಿಸಿ ಕೊಡಿ. ನಾನು ಕಾಂಪೌಂಡ್ ಆಗುವವರೆಗೆ ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸುವ ಜನರು ಶಾಲಾ ಆವರಣದೊಳಗೆ ಬಂದು ಶಾಲೆಯ ಪರಿಸರವನ್ನು ಅಸುಚಿಗೊಳಿಸಿ ತೆರಳುತ್ತಿದ್ದಾರೆ. ಇದರಿಂದಾಗಿ ಶಾಲಾ ಆವರಣವೆಲ್ಲ ಕಸಕಡ್ಡಿಗಳಿಂದ ತುಂಬಿ ತುಳುಕುತ್ತಿದೆ.
ಶಾಲೆಯಲ್ಲಿ ಪಾಠ ಕೇಳಲು ಹಾಗೂ ಪರೀಕ್ಷಾ ಸಮಯದಲ್ಲಿ ಪರೀಕ್ಷೆ ಬರೆಯಲು ಸಹ ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಬಾಲಕಿಯು ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಈ ಮೂಲಕ ೪ನೇ ತರಗತಿ ವಿದ್ಯಾರ್ಥಿನಿ ತಮ್ಮ ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಕಟ್ಟಿಸಬೇಕೆಂದು ಹೋರಾಟ ನಡೆಸುತ್ತಿದ್ದಾಳೆ.
ಇತರ ಸಂದರ್ಭಗಳಲ್ಲಿ ಆಟ ಆಡೋಕೆ ಮೈದಾನ ಇರಲ್ಲ. ಮೈದಾನದಲ್ಲಿ ವಾಹನಗಳು ನಿಲ್ಲಿಸುವುದು, ಎಂಜಲು ಎಲೆಗಳನ್ನು ಎಸೆಯುವುದರಿಂದ ಆಟ ಮತ್ತು ಪಾಠಕ್ಕೆ ತೀವ್ರ ಸಮಸ್ಯೆ ಆಗುತ್ತಿದ್ದು, ಕೂಡಲೇ ಆಟದ ಮೈದಾನಕ್ಕೆ ಕಾಂಪೌಂಡ್ ಕಟ್ಟಿಸಿಕೊಡಿ ಇಲ್ಲಾ ಅಂದ್ರೆ ನಾನು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ.
ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ನೂರಿನ್ನಿಸ, ಕಾಂಪೌಂಡ್ ನಿರ್ಮಿಸುವಂತೆ ಸೂಕ್ತಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೂ ಕೂಡ ಪತ್ರವನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ.