
ನವದೆಹಲಿ,ಮಾ.೧೮- ರಾಷ್ಟ್ರ ರಾಜಧಾನಿಯ ಕಟ್ಟಡವೊಂದರಲ್ಲಿ ಇಂದು ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಪಾಲಂ ಪ್ರದೇಶದ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಏಳು ಜನರು ಸಜೀವ ದಹನಗೊಂಡಿದ್ದಾರೆ.ಇದರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ.
ಏಳು ಮಂದಿ ಸುಟ್ಟು ಕರಕಲಾಗಿದ್ದಾರೆ. ಬೆಂಕಿಯ ಮಾಹಿತಿ ಬಂದ ತಕ್ಷಣ ಬೆಂಕಿಯನ್ನು ನಂದಿಸಲು ಮತ್ತು ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ೩೦ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ.ಬೆಂಕಿಯನ್ನು ನಂದಿಸುವ ಕಾರ್ಯ ಭರದಿಂದ ನಡೆಯುತ್ತಿದೆ.ಬೆಂಕಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.
ಪಾಲಂನಲ್ಲಿರುವ ಕಟ್ಟಡವೊಂದರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ ೭ ಗಂಟೆಗೆ ಮಾಹಿತಿ ಸಿಕ್ಕಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಪಾಲಂ ಪ್ರದೇಶದಲ್ಲಿ ಸಂಭವಿಸಿದ ಈ ಬೃಹತ್ ಬೆಂಕಿಯಲ್ಲಿ ಅನೇಕ ಜನರು ಸಿಲುಕಿರುವ ಸಾಧ್ಯತೆಯೂ ಇದೆ. ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ನೌಕರರು ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಪಾಲಂ ಪ್ರದೇಶದ ಮೆಟ್ರೋ ನಿಲ್ದಾಣದ ಬಳಿ ಈ ಕಟ್ಟಡಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ಒಂಬತ್ತು ಸದಸ್ಯರು ಬೆಂಕಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು ಮತ್ತು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ., ಮೂವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಒಂದು ಫ್ಲಾಟ್‌ನಲ್ಲಿ ಹೊತ್ತಿದ ಬೆಂಕಿ ಶರವೇಗದಲ್ಲಿ ವೇಗವಾಗಿ ಹರಡಿದೆ. ಮೂವತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ. ಬೆಂಕಿಯನ್ನು ನಂದಿಸುವ ಪ್ರಯತ್ನಗಳು ಮುಂದುವರೆದಿವೆ.
ಬೆಂಕಿಯ ಬಲೆಯಿಂದ ಪಾರಾಗಲು ಇಬ್ಬರು ಕಟ್ಟಡದಿಂದ ಹಾರಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸಹ ಸ್ಥಳದಲ್ಲಿದ್ದಾರೆ. ಬೆಂಕಿಯ ನಂತರ ಕಟ್ಟಡದಿಂದ ಹೊಗೆಯ ರಾಶಿ ಹೊರಬರುತ್ತಿರುವುದು ಕಂಡುಬಂದಿದೆ.






























