
ಕಲಬುರಗಿ,ಡಿ.15: ಜೇವರಗಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ ಬಂಧಿತರಿಂದ 67 ಗ್ರಾಂ ಚಿನ್ನಾಭರಣ ಮತ್ತು 212 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಡ್ರಾಮಿ ತಾಂಡಾದ ಸುನೀಲ್ ಪರಶುರಾಮ ಪವಾರ ಮತ್ತು ಯಡ್ರಾಮಿ ತಾಲೂಕು ಇಜೇರಿ ಗ್ರಾಮದ ಮಹ್ಮದ್ ಯುನೂಸ್ ಖಾದರ ಪಟೇಲ್ ಬಂಧಿತ ಆರೋಪಿಗಳು.
ನ. 27 ರಂದು ಗುಡೂರ (ಎಸ್.ಎ) ಗ್ರಾಮದಲ್ಲಿ ಕಳ್ಳರು ತಿಜೋರಿ ಕೀಲಿ ಮುರಿದು ಒಟ್ಟು 109 ಗ್ರಾಂ ತೂಕದ ಬಂಗಾರದ ಆಭರಣಗಳು, 212 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 1800 ರೂ ನಗದು ಹಣ ಹೀಗೆ ಒಟ್ಟು 4,70,600 ರೂ ಕಿಮ್ಮತ್ತಿನ ಸ್ವತ್ತು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದ್ರೌಪದಿ ಯಲ್ಲಾಲಿಂಗ ನಾಗನಹಳ್ಳಿ ಎಂಬುವವರು ನೀಡಿದ ದೂರಿನ ಮೇರೆಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಕಳುವಿನ ಪತ್ತೆ ಕುರಿತು ಕಲಬುರಗಿ ಗ್ರಾಮೀಣ ಉಪ-ವಿಭಾಗ ಪೆÇಲೀಸ್ ಉಪಾಧೀಕ್ಷಕ ಎನ್. ಲೋಕೇಶ್ವರಪ್ಪ ಮಾರ್ಗದರ್ಶನದಲ್ಲಿ ಜೇವರಗಿ ಸಿಪಿಐ ರಾಜೇಸಾಹೇಬ ನದಾಪ ನೇತೃತ್ವದಲ್ಲಿ ಜೇವರಗಿ ಪೆÇಲೀಸ್ ಠಾಣೆಯ ಪಿ.ಎಸ್.ಐಗಳಾದ ಕಲಾವತಿ ಮತ್ತು ಗಜಾನಂದ ಬಿರಾದಾರ, ತುಕಾರಾಮ, ಮಲ್ಲಣ್ಣ, ರಾಜಶೇಖರ, ರಮೇಶ, ಗಿರೀಶ, ಅವರ ತಂಡ ಆರೋಪಿತನ ಪತ್ತೆಗಾಗಿ ಬಲೆ ಬೀಸಿ ಡಿ.7 ರಂದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣ:
ಡಿ. 1 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಜೇರಿ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯು ಚಾಕು ಹಿಡಿದುಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೆದರಿಸಿ 25 ಗ್ರಾಂ ಬಂಗಾರದ ಆಭರಣಗಳು ಮತ್ತು 1 ಲಕ್ಷ ರೂ ನಗದು ಹಣ ಕಿತ್ತುಕೊಂಡು ಹೋಗಿದ್ದು, ಈ ಕುರಿತು ಅಮೀರಬೀ ಮಹ್ಮದ ಪಟೇಲ್ ಖಾಲೇಗೌಡ ನೀಡಿದ ದೂರು ಜೇವರಗಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಜೇವರಗಿ ಪೆÇಲೀಸ್ ಠಾಣೆಯ ಪಿ.ಎಸ್.ಐ ಗಳಾದ ಕಲಾವತಿ, ಗಜಾನಂದ ಬಿರಾದಾರ, ಪದ್ಮಾವತಿ ಮತ್ತು ಸಿಬ್ಬಂದಿಗಳಾದ ಭಾಗ್ಯಶ್ರೀ ,ಚಂದ್ರಾಮ, ಭಾಗಪ್ಪ( ನೆಲೋಗಿ ಠಾಣೆ) ರಾಜಶೇಖರ ಕೊಂಡಗುಳಿ, ರಮೇಶ, ಶ್ರೀಮಂತ, ಶಿವಲಿಂಗಪ್ಪ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು
























