ಪ್ರತ್ಯೇಕ ಅಪಘಾತ: ೭ ಮಂದಿ ಸಾವು

ಕೊಪ್ಪಳ, ಅ.೭- ಕೊಪ್ಪಳ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.


ಸೀಗೆ ಹುಣ್ಣಿಮೆ ಅಂಗವಾಗಿ ಕೊಪ್ಪಳ ತಾಲ್ಲೂಕಿನ ಹುಲಿಗೇಯ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಖಾಸಗಿ ಬಸ್ ಹರಿದು ಮೂವರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಬೈಕ್ ಡಿಕ್ಕಿ ಹೊಡೆದು ಪಾದಯಾತ್ರಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.


ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಅನ್ನಪೂರ್ಣ(೪೦), ಪ್ರಕಾಶ್(೨೫) ಹಾಗೂ ಶರಣಪ್ಪ(೧೯) ಮೃತಪಟ್ಟವರು. ಕಳೆದ ಎರಡು ದಿನಗಳ ಹಿಂದೆ ಇವರು ತಮ್ಮ ಗ್ರಾಮದಿಂದ ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಇನ್ನು ಕೇವಲ ೩ ಗಂಟೆ ಕಳೆದಿದ್ದರೆ ಹುಲಿಗೆಮ್ಮ ದೇವಸ್ಥಾನವನ್ನು ತಲುಪುತ್ತಿದ್ದರು. ದುರಾದೃಷ್ಟವಶಾತ್ ಅದಕ್ಕೂ ಪೂರ್ವದಲ್ಲಿಯೇ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಘಟನೆಯಲ್ಲಿ ಮೃತಪಟ್ಟವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ತಳ್ಳಿಹಾಳ ಗ್ರಾಮದವರು ಹುಣ್ಣಿಮೆಗೆ ಎರಡು ದಿನ ಮೊದಲೇ ಪಾದಯಾತ್ರೆ ಆರಂಭಿಸಿದ ತಳ್ಳಿಹಾಳ ಗ್ರಾಮದ ಭಕ್ತರು ಇನ್ನೂ ೩-೪ ಗಂಟೆ ಆಗಿದ್ದರೆ ದೇವಸ್ಥಾನ ತಲುಪುತ್ತಿದ್ದರು. ಅಷ್ಟರಲ್ಲೇ ಬಸ್ ಹರಿದು ಮೂವರು ಮೃತಪಟ್ಟಿದ್ದು ಬಸ್ ಹರಿದ ರಭಸಕ್ಕೆ ಮೂವರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಮನಕಲಕುವಂತಿತ್ತು.


ಪ್ರತಿ ಹುಣ್ಣಿಮೆ ಹಾಗೂ ಮಂಗಳವಾರ, ಶುಕ್ರವಾರ ದಿನ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ಸಾಕಷ್ಟು ಜನ ಪಾದಯಾತ್ರೆ ತೆರಳುವುದು ಸಾಮಾನ್ಯ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ಅಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಗ್ರಾಮೀಣ ಸಿಪಿಐ ಸುರೇಶ್ ಭೇಟಿ ನೀಡಿದ್ದರು.


ಪಾದಯಾತ್ರಿ ಸಾವು:


ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ವೀರೇಶ್ ಹಳ್ಳಿಕೇರಿ (೨೮) ಮೃತ ಯುವಕ ಎಂಬುದು ತಿಳಿದುಬಂದಿದೆ. ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ಬಳಿ ದುರ್ಘಟನೆ ಇಂದು ನಡೆದಿದೆ.


ಕುಕನೂರಿನಿಂದ ಹುಲಿಗೆಮ್ಮ ದೇವಿಗೆ ೯ ಜನರು ಪಾದಯಾತ್ರೆ ಹೊರಟಿದ್ದರು. ಭಾನಾಪೂರದ ಬಳಿ ಬಂದಾಗ ಪಾದಯಾತ್ರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಒಬ್ಬ ಪಾದಯಾತ್ರಿ ಮೃತಪಟ್ಟಿದ್ದರೆ, ಮತ್ತೊಬ್ಬ ಪಾದಯಾತ್ರಿ ರಮೇಶ್‌ಗೆ ಗಾಯವಾಗಿದೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ಅಪಘಾತ-೩ ಸಾವು ೨೧ ಮಂದಿಗೆ ಗಾಯ

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಹೆದ್ದಾರಿ ರಸ್ತೆಯಲ್ಲಿನ ಕಲ್ಕೆರೇ ಗ್ರಾಮದ ಸಮೀಪ ಸೋಮವಾರ ರಾತ್ರಿ ಟೆಂಪೋ,ಕ್ಯೋಸರ್ ಹಾಗೂ ಅಂಬ್ಯೂಲೆನ್ಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು ಇಪ್ಪತ್ತೊಂದುಕ್ಕೂ ಹೆಚ್ಚು ಮಂದಿ ಗಾಯಗಳಿಂದ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಖಾಸಗಿ ಕಾರ್ಯಕ್ರಮದಲ್ಲಿ ಅಡುಗೆ ಮಾಡಲು ಬಂದಿದ್ದ ಬಾಣಸಿಗರು ಮತ್ತು ಸಹಾಯಕರು ಕೆಲಸ ಮುಗಿಸಿ ಕೊಂಡು ಟೆಂಪುದಲ್ಲಿ ವಾಪಾಸ್ಸ್ ಹೋಗುತ್ತಿದ್ದ ಸಂದರ್ಭಧಲ್ಲಿ ಟೆಂಪು ಹಾಗೂ ಈಷರ್ ನಡುವೆ ಅಪಘಾತ ಸಂಭವಿಸಿದೆ. ಟೆಂಪೋ ಹಾಗೂ ಅಂಬ್ಯೂಲೆನ್ಸ್ ಚಾಲಕರು ಇಬ್ಬರು ಸ್ಥಳದಲ್ಲಿ ಹಾಗೂ ಟೆಂಪೊದಲ್ಲಿದ್ದ ಮತ್ತೊಬ್ಬರು ಬಂಗಾರ ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮಾರು ಇಪ್ಪತ್ತೊಂದುಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಬಂಗಾರಪೇಟೆ, ಕೋಲಾರ ಹಾಗೂ ಕೆ.ಜಿ.ಎಫ್ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು, ಚೆನ್ನೈ ಕಾರಿಡಾರ್ ರಸ್ತೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.


ಸೋಮವಾರ ಎಕ್ಸ್ಸ್‌ಪ್ರೆಸ್ ವೇನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಅಡುಗೆ ಮಾಡಲು ಬಂದಿದ್ದ ಬೆಂಗಳೂರಿನ ಎಸ್.ಕೆ.ಸಿ. ಕ್ಯಾಟರಿಂಗ್ ಸಿಬ್ಬಂದಿ ಟೆಂಪೋ ಟ್ರಾವೆಲರ್ ವಾಹನದಲ್ಲಿ ಸಂಜೆ ಬೆಂಗಳೂರಿಗೆ ವಾಪಾಸ್ ಹೋಗುವಾಗ ಈ ದುರ್ಘಟನೆ ನಡೆದಿದ್ದು, ಮೃತರನ್ನು ಶಿವರಾಂ. ಆಶೋಕ್ ಮತ್ತು ವಿಕ್ರಂಪಾಲ್ ಎಂದು ಗುರುತಿಸಲಾಗಿದೆ.


೧೧ ಮಂದಿ ಗಾಯಾಳುಗಳನ್ನು ಕೆ.ಜಿ.ಎಫ್. ಹಾಗೂ ೧೦ ಮಂದಿಯನ್ನು ಬಂಗಾರಪೇಟೆ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಕೋಲಾರ ಮತ್ತು ಹೊಸಕೋಟೆ ಆಸ್ಪತ್ರೆಗೆ ರವಾನಿಸಲಾಗಿದೆ.


ಅಡುಗೆ ಕಾರ್ಯಕ್ರಮ ಮುಗಿಸಿ ಕೊಂಡು ಸೋಮವಾರ ಸಂಜೆ ೭ ಗಂಟೆಗೆ ಕ್ಯಾಟರಿಂಗ್ ಸಿಬ್ಬಂದಿಗಳು ಬೆಂಗಳೂರು ಮಾರ್ಗದ ಕಡೆ ಹೋಗುವಾಗ ಕಾರಿಡಾರ್ ರಸ್ತೆಯ ನಡುವೆ ಅವೈಜ್ಞಾನಿಕವಾಗಿ ಬಿಡಲಾಗಿದ್ದ ಜಾಗದಲ್ಲಿ ಏಕಾಏಕಿ ಅತಿ ವೇಗದಿಂದ ಯೂ ಟರ್ನ್ ತೆಗೆದು ಕೊಂಡು ಹಿಂದಿನಿಂದ ಬಂದ ಕ್ಯಾಂಟರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಬಾಣಸಿರಿದ್ದ ವಾಹನಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನವು ರಸ್ತೆಯಲ್ಲಿ ಪಲ್ಟಿ ಹೊಡೆದು ಬಿತ್ತು ಎನ್ನಲಾಗಿದೆ.


ಘಟನೆ ಸ್ಥಳಕ್ಕೆ ಕೆ.ಜಿ.ಎಫ್ ಎಸ್.ಪಿ. ಹಾಗೂ ಬಂಗಾರಪೇಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಟೋಲ್ ಬಳಿ ಇದ್ದ ೫-೬ ಮಂದಿ ಹೋಂಗಾರ್ಡ್ ದ್ವಿಚಕ್ರದಲ್ಲಿ ಸ್ಥಳಕ್ಕೆ ಅಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.