
ಕಲಬುರಗಿ,ಮಾ.24-ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹೋರಾಡಿದ ವೀರ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್‍ದೇವ್ ಮತ್ತು ರಾಜಗುರು ಅವರು ಹುತಾತ್ಮರಾದ ದಿನ. 23 ಮಾರ್ಚ್, 1931ರಂದು ಬ್ರಿಟಿಷ್ ಆಡಳಿತ ಭಾರತಾಂಬೆಯ ಈ ಮೂವರು ಸುಪುತ್ರರನ್ನು ನೇಣಿಗೇರಿಸಿತ್ತು. ಶಹೀದ್ ದಿವಸ್ ಎಂದು ಆಚರಿಸಲಾಗುವ ಇಂದಿನ ದಿನ “ಇಂಕ್ವಿಲಾಬ್ ಜಿಂದಾಬಾದ್” ಘೋಷಣೆ, ಭಾರತದ ಮೂಲೆ ಮೂಲೆಯನ್ನು ತಲುಪಿತ್ತು. ಕೇವಲ 23 ವರ್ಷದ ಮೂವರು ತರುಣರು “ಮೇರಾ ರಂಗ್ ದೇ ಬಸಂತಿ ಚೋಲಾ” ಎಂಬ ದೇಶಭಕ್ತಿ ಹಾಡನ್ನು ಹಾಡುತ್ತಾ ನೇಣುಗಂಬದತ್ತ ಹೊರಟಿದ್ದರೆ, ಸ್ವಾತಂತ್ರ್ಯ ಹೋರಾಟದ ಕಿಡಿ ಜ್ವಾಲೆಯಾಗಿ ದೇಶದ ಉದ್ದಗಲಕ್ಕೂ ಹರಡಿತ್ತು ಎಂದು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಗಾಂಧೀಜಿ ಮೋಳಕೆರೆ ಹೇಳಿದರು.
ನಗರದ ಕೆಪಿಇ ಸಂಸ್ಥೆಯ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಎಂ. ಕಾಂತಾ ಅವರು ವಿದ್ಯಾರ್ಥಿಗಳು ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ವೀರ ಯುವಕರನ್ನು ಸ್ಮರಿಸಿ ಅಮ್ಮ ವ್ಯಕ್ತಿತ್ವವನ್ನು ತಾವು ರೂಪಿಸಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿರ್ಮಲಾ ಸಿರಗಾಪೂರ,ಡಾ.ಶಿವಕುಮಾರ ,ಡಾ.ಅರುಣ ಜೋಳದಕೂಡ್ಲಿಗಿ, ಶೃತಿ ಇತರರು ಇದ್ದರು.
ಡಾ.ವಸಂತ ನಾಶಿ ನಿರೂಪಿಸಿದರು ಡಾ.ಹರ್ಷವರ್ಧನ ಬಿ ಸ್ವಾಗತಿಸಿದರು ಡಾ.ಸುದರ್ಶನ ಮದನ್ಕರ್ ವಂದಿಸಿದರು.



























