ದೇಶಾದ್ಯಂತ ಮತಪಟ್ಟಿ ಪರಿಷ್ಕರಣೆ

ಬಿಹಾರ ಮಾದರಿಯಲ್ಲೇ ಎಸ್‌ಐಆರ್, ಸೆ.೧೦ ರಂದು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಸಭೆ ಕರೆದ ಸಿಇಸಿ

ನವದೆಹಲಿ,ಸೆ.೭:ಬಿಹಾರದ ಮಾದರಿಯಲ್ಲೇ ದೇಶಾದ್ಯಂತ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.


ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ದೇಶಾದ್ಯಂತ ಮತದಾರ ಪಟ್ಟಿಯ ವಿಶೇಷ ಹಾಗೂ ಸಮಗ್ರ ಪರಿಷ್ಕರಣೆ ಕೈಗೆತ್ತಿಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಎಲ್ಲ ಸಿದ್ಧತೆ ನಡೆಸಿದೆ.


ಈ ಸಂಬಂಧ ಇದೇ ತಿಂಗಳ ೧೦ ರಂದು ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಭೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸಲಿದೆ.


ಬಿಹಾರ ನಂತರ ದೇಶಾದ್ಯಂತ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮಾಡಲಾಗುವುದು. ೨೦೨೬ರಲ್ಲಿ ನಡೆಯಲಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಮುಂಚಿತವಾಗಿಯೇ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳ್ಳಲಿದೆ.


ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕೇಂದ್ರ ಚುನಾವಣಾ ಆಯೋಗವು ೨ ವಿಧಾನಗಳನ್ನು ಸೂಚಿಸಿದ್ದು, ಮೊದಲನೆಯ ವಿಧಾನದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ತೆರಳಿ ಮೊದಲೇ ಭರ್ತಿ ಮಾಡಿದ ಮತದಾರರ ಮಾಹಿತಿ, ದಾಖಲೆಗಳ ಅರ್ಜಿಯನ್ನು ತೆಗೆದುಕೊಳ್ಳುವುದು, ೨ನೆಯದು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಮತದಾರರ ಮಾಹಿತಿ ಇರುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬಹುದು. ಹೀಗೆ ಎರಡು ವಿಧಾನಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ.


ಪ್ರತಿ ಮತಗಟ್ಟೆಗೆ ೧,೨೦೦ ಮತದಾರರನ್ನು ಮಿತಿಗೊಳಿಸುವ ಬಗ್ಗೆಯೂ ಚುನಾವಣಾ ಆಯೋಗ ಮುಂದಾಗಿದೆ ಎಂದು ಹೇಳಲಾಗಿದೆ. ಈ ತಿಂಗಳಾಂತ್ಯ ಇಲ್ಲವೆ ಮುಂದಿನ ತಿಂಗಳು ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದ್ದು, ೨೦೨೬ರ ಜನವರಿ ೧ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.


ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಆಕ್ಷೇಪ ಸಲ್ಲಿಸಲು ೧ ತಿಂಗಳ ಕಾಲಾವಕಾಶವನ್ನು ಚುನಾವಣಾ ಆಯೋಗ ನೀಡಲಿದೆ.

  • ಬಿಹಾರ ರಾಜ್ಯದ ಬಳಿಕ ದೇಶಾದ್ಯಂತ ಮತದಾರ ಪಟ್ಟಿ ತೀವ್ರ ಪರಿಷ್ಕರಣೆ ಆರಂಭ
  • ತಿಂಗಳಾಂತ್ಯ ಇಲ್ಲವೇ ಮುಂದಿನ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಪ್ರಕ್ರಿಯೆ
  • ಇದೇ ೧೦ ರಂದು ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳ ಸಭೆ ಕರೆದ ಚುನಾವಣಾ ಆಯೋಗ
  • ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಅನುಕೂಲ
  • ಮತದಾರ ಪಟ್ಟಿ ಪರಿಷ್ಕರಣೆ ಬಳಿಕ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಅವಕಾಶ
  • ೨೦೨೬ರ ಜನವರಿ ೧ ರಂದು ಅಂತಿಮ ಮತದಾರ ಪಟ್ಟಿ ಪ್ರಕಟ ನಿರೀಕ್ಷೆ
  • ಪ್ರತಿ ಬೂತ್‌ಗೆ ೧,೨೦೦ ಮತದಾರರನ್ನು ಮಿತಿಗೊಳಿಸಲು ಯೋಜನೆ