ನಿವೃತ್ತ ವೈದ್ಯನಿಗೆ 1.26 ಕೋಟಿ ರೂ.ವಂಚನೆ

ಕಲಬುರಗಿ,ಡಿ.15-ಆನ್‍ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ನಿವೃತ್ತ ವೈದ್ಯರೊಬ್ಬರಿಗೆ 1,26,74,047 ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹುಮನಾಬಾದ ರಿಂಗ್ ರಸ್ತೆಯ ಗಂಜ್ ಏರಿಯಾ ನಿವಾಸಿ, ನಿವೃತ್ತ ವೈದ್ಯ ಶಿವಶರಣಪ್ಪ ಬಿರಾದಾರ ಅವರೇ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಅವರ ಪತ್ನಿ ಉಷಾ ಬಿರಾದಾರ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಿವೃತ್ತ ವೈದ್ಯರಾದ ಶಿವಶರಣಪ್ಪ ಬಿರಾದಾರ ಅವರ ಮೊಬೈಲ್ ನಂಬರ್‍ಗೆ ವಾಟ್ಸಪ್ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಪ್ರದೀಪಕುಮಾರ, ಮುಂಬೈ ಕ್ರೈಂ ಬ್ರ್ಯಾಂಚ್‍ನಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಮುಂಬೈ ಕೆನರಾ ಬ್ಯಾಂಕ್‍ನಲ್ಲಿ ಅಕೌಂಟ್ ಇದೆ. ಅದು ನರೇಶ ಗೋಯಲ್ ಮನಿಲಾಂಡ್ರಿಂಗ್ ಕೇಸ್‍ನಲ್ಲಿ ಭಾಗಿಯಾಗಿದ್ದು, ನಿಮ್ಮ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಖಾತೆಗೆ 2 ಕೋಟಿ ರೂ.ವರ್ಗಾವಣೆಯಾಗಿದೆ. ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೆದರಿಸಿದ್ದಾನೆ. ಆಗ ಶಿವಶರಣಪ್ಪ ಬಿರಾದಾರ ಅವರು ಕೆನರಾ ಬ್ಯಾಂಕ್‍ನಲ್ಲಿ ತಾವು ಖಾತೆ ಹೊಂದಿಲ್ಲ ಎಂದು ಹೇಳಿದರೂ ಪ್ರತಿದಿನ ವಾಟ್ಸಪ್ ವಿಡಿಯೋ ಮತ್ತು ಆಡಿಯೋ ಕರೆ ಮಾಡಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿ ಪಡೆದು, ಆನ್ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಂತಹಂತವಾಗಿ 1.26 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.