
ಕಲಬುರಗಿ,ಮಾ.21: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪವಿತ್ರ ಕ್ಷೇತ್ರ ಶ್ರವಣಬೆಳಗೋಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀತಿ ಭಟ್ಟಾರಕ ಮಹಾಸ್ವಾಮೀಜಿಯವರ ಹೆಸರಿನ ಮೇಲೆ ಜೈನ ಅಧ್ಯಯನ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದ್ದು ಇದರ ಕುರಿತು ಕೇಂದ್ರ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದ್ದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ರವರು ಭರವಸೆ ನೀಡಿದರು.
ಕಲಬುರಗಿ ಜಿಲ್ಲಾ ಜೈನ ಯುವ ವೇದಿಕೆ ವತಿಯಿಂದ ತೆರಳಿದ ನಿಯೋಗದ ಸದಸ್ಯರುಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಜೈನ ಅಧ್ಯಯನ ಪೀಠ ಸ್ಥಾಪಿಸುವ ದಿಶೆಯಲ್ಲಿ ಕಳೆದ 2-3 ವರ್ಷಗಳಿಂದ ನಿರಂತರವಾಗಿ ಕೇಂದ್ರದ ಶಿಕ್ಷಣ ಸಚಿವರ ಜೊತೆ ಸಂಪರ್ಕ ಮತ್ತು ಪತ್ರ ವ್ಯವಹಾರ ಮಾಡಲಾಗಿದ್ದು ಈ ದಿಶೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ನಿಯೋಗಕ್ಕೆ ವಿವರಿಸಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೈನ ಧರ್ಮದ ಪ್ರಾಚೀನ ಬಸದಿಗಳು ಶಿಲಾ ಶಾಸನಗಳು ಸೇರಿದಂತೆ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇಟವು ಸಹ ಇದೇ ಪ್ರಾಂತದಲ್ಲಿರುವುದರಿಂದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸುವದು ಅಗತ್ಯವಾಗಿದ್ದು ಈ ದಿಶೆಯಲ್ಲಿ ಈಗಾಗಲೇ ಕಲಬುರಗಿ ಜಿಲ್ಲಾ ಜೈನ ಯುವ ವೇದಿಕೆ ವತಿಯಿಂದ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ , ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ,ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು ಶೀಘ್ರವೇ ಅಧ್ಯಯನ ಪೀಠ ಸ್ಥಾಪಿಸುವಂತೆ ವೇದಿಕೆ ಅಧ್ಯಕ್ಷ ಸುರೇಶ ತಂಗಾ ಕುಲಪತಿಗಳಲ್ಲಿ ಮನವಿ ಮಾಡಿದರು.
ನಿಯೋಗದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಸಂಗಮಿ, ಖಜಾಂಚಿ ಚೇತನ ಪಂಡಿತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



























