
ಬೆಳಗಾವಿ, ಡಿ. ೧೮- ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವ ಪ್ರತಿಕ್ರಿಯ ನಡೆದಿದ್ದು, ೧೧ ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ೪೧,೦೮೮ ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಈ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ೧,೭೮, ೯೩೫ ಹುದಾದೆಗಳು ಮಂಜೂರಾಗಿರುತ್ತವೆ. ಈ ಪೈಕಿ ೧,೩೩,೩೪೫ ಹುದ್ದೆಗಳು ಭರ್ತಿಯಾಗಿದ್ದು, ೪೫,೫೯೦ ಹುದ್ದೆಗಳು ಖಾಲಿ ಇರುತ್ತವೆ. ಹಾಗೆಯೇ ರಾಜ್ಯದಲ್ಲಿ ೫೦೨೪ ಸರ್ಕಾರಿ ಪ್ರೌಢಶಾಲೆಗಳಿದ್ದು, ಈ ಪ್ರೌಢಸಾಲೆಗಳಿಗೆ ೪೪,೧೪೪ ಹುದ್ದೆಗಳು ಮಂಜೂರಾಗಿರುತಾತವೆ.
ಈ ಪೈಕಿ ೩೨೦೧೦ ಹುದ್ದೆಗಳು ಭರ್ತಿಯಾಗಿದ್ದು, ೧೨,೧೩೪ ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ೨೦೨೫-೨೬ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ ೪೦ ಸಾವಿರ ಮತ್ತು ಪ್ರೌಢಶಾಲೆಗಳಿಗೆ ೧೧ ಸಾವಿರ ಒಟ್ಟಾರೆಯಾಗಿ ೫೧ ಸಾವಿರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆಯನ್ನುಸರಿದೂಗಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ೧೩ ಸಾವಿರ ಶಿಕ್ಷಕರ ನೇಮಕಾತಿ ಮಾಡಿದೆ. ಈ ಶಿಕ್ಷಕರ ನೇಮಕಾತಿ ನ್ಯಾಯಾಲಯದಲ್ಲಿದ್ದು, ಅದನ್ನೆಲ್ಲಾ ಬಗೆಹರಿಸಿಕೊಂಡು ಶಿಕ್ಷಕರನ್ನು ನೇಮಕಾತಿ ಮಾಡಿದ್ದೇವೆ ಇದರ ಜತೆಗೆ ೧೧ ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ವಿದ್ಯಾರ್ಥಿಗಳ ಪಾಠಕ್ಕೆ ಈ ಶಿಕ್ಷಕರ ನೇಮಕಾತಿ ಮೂಲಕ ಸಮರ್ಪಕ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯದ ಅನುದಾನಿತ ಶಾಲೆಗಳಲ್ಲೂ ೫೯೦೦ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅಲ್ಲದೆ, ವಿಕಲಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಕ್ಷಕರನ್ನು ಗಣತಿ ಮತ್ತಿತರ ಕಾರ್ಯಗಳಿಗೆ ನೇಮಕ ಮಾಡಲು ವೈಯುಕ್ತಿಕವಾಗಿ ನನಗೂ ಇಷ್ಟ ಇಲ್ಲ. ಆದರೆ, ವ್ಯವಸ್ಥೆಯಲ್ಲಿ ಇಂತಹ ಕಾರ್ಯಗಳಿಗೆ ಶಿಕ್ಷಕರನ್ನು ನಿಯುಕ್ತಿ ಮಾಡುವುದು ಅನಿವಾರ್ಯವಾಗಿದೆ. ನಾನು ಕೇಂದ್ರ ಸರ್ಕಾರ ನಡೆಸುವ ಜನಗಣತಿಗೂ ಶಿಕ್ಷಕರನ್ನು ಬಳಕೆ ಮಾಡಬಾರದು ಎಂದು ಕೋರಿ ಕೇಂದ್ರಕ್ಕೂ ಪತ್ರ ಬರೆಯುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿನ ಸರ್ಕಾರಿ ಶಾಲೆಯ ೧ ರಿಂದ ೧೦ನೇತರಗತಿಯ ಮಕ್ಕಳಿಗೆ ವಿದ್ಯಾವಿಕಾಸ್ ಯೋಜನೆಯಡಿ ಸಮವಸ್ತ್ರ ಶೂ ಮತ್ತು ಸಾಕ್ಸ್‌ಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಸುಮಾರು ೮೩ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಹಾಗೆಯೇ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.



























