ಶರಣ ಸ್ಮಾರಕಗಳ ರಕ್ಷಣೆ ಅಗತ್ಯ: ಡಾ.ವೀರಶೆಟ್ಟಿ ಗಾರಂಪಳ್ಳಿ

ಕಲಬುರಗಿ,ಸೆ.8-ಶರಣ ಸ್ಮಾರಕಗಳ ರಕ್ಷಣೆ ಇಂದಿನ ತುರ್ತು ಅವತ್ಯವಾಗಿದೆ ಎಂದು ಡಾ.ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.
ಕಲಬುರಗಿಯ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಂಡಮ್ಮ ಶರಣಪ್ಪ ದಂಡೆಯವರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 867ನೆಯ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಪರಿಸರದ ಶರಣ ಸ್ಮಾರಕಗಳ ಐತಿಹಾಸಿಕ ಮಹತ್ವ ಕುರಿತು ಮಾತನಾಡಿದ ಅವರು, ಶರಣ ಸ್ಮಾರಕಗಳು ಶರಣ ಚಳುವಳಿಯ ಐತಿಹಾಸಿಕ ಸಾಕ್ಷಿಯಾಗಿ ನಿಲ್ಲುತ್ತವೆ. ಮೌಖಿಕ ಪರಂಪರೆಯಲ್ಲಿ ಜನಪದರು ಶರಣರ ಮತ್ತು ಶರಣ ಸ್ಮಾರಕಗಳ ಕುರಿತಾಗಿ ಮಾಹಿತಿ ಒದಗಿಸುತ್ತಾರೆ .ಶರಣ ಸ್ಮಾರಕಗಳು ಅನ್ಯ ಆಚರಣೆಗಳ ಪ್ರಭಾವಕ್ಕೆ ಒಳಗಾಗುತ್ತಿವೆ ಇದು ದುರ್ದೈವದ ಸಂಗತಿ. ಕರ್ನಾಟಕ ಪತ್ರಾಗಾರ ಇಲಾಖೆಯಲ್ಲಿ ಹಲವಾರು ಶರಣ ಸ್ಮಾರಕಗಳ ಕುರಿತಾದ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ ಎಂದರು.
ಡಾ.ವೀರಣ್ಣ ದಂಡೆ ಅವರು ಮಾತನಾಡಿ, ಶರಣ ಸ್ಮಾರಕಗಳ ಕುರಿತಾಗಿ ಸಂಶೋಧನೆ ಮಾಡಿ ದಾಖಲಿಸಿದಾಗ ಮಾತ್ರ ಶರಣ ಸ್ಮಾರಕಗಳು ಶಿಷ್ಟ ಸಾಹಿತ್ಯದಲ್ಲಿ ದಾಖಲೆಗೊಂಡಿವೆ .ಅದಕ್ಕಿಂತ ಮುಂಚೆ ಶರಣ ಸ್ಮಾರಕಗಳು ಕೇವಲ ಮೌಖಿಕ ಪರಂಪರೆಯಾಗಿ ಉಳಿದುಕೊಂಡಿದ್ದವು. ಇಡೀ ಬಸವಕಲ್ಯಾಣವನ್ನೇ ಒಂದು ಸ್ಮಾರಕವಾಗಿ ಪರಿಗಣಿಸಿದಾಗ ಮಾತ್ರ ಅದರ ಚಾರಿತ್ರಿಕ ಮಹತ್ವ ನಮಗೆ ತಿಳಿಯಲು ಸಾಧ್ಯವಾಗುತ್ತದೆ. ಶರಣ ಸಂಸ್ಕøತಿ ಸಂಪೂರ್ಣ ಅರ್ಥ ಮಾಡಿಕೊಳ್ಳಲು ಇಡೀ ಬಸವಕಲ್ಯಾಣದ ಅಭಿವೃದ್ಧಿಯಾಗಬೇಕು ಆಗ ಮಾತ್ರ ಸಾಧ್ಯವಾಗುತ್ತದೆ. ಶರಣನಲ್ಲದವನಾದ ವೀರಭದ್ರನ ದೇವಾಲಯಗಳನ್ನು ಕೂಡ ಶರಣ ಸ್ಮಾರಕಗಳೆಂದು ಸಂಶೋಧನೆ ಮಾಡಿ ವಿಶ್ವವಿದ್ಯಾಲಯಗಳು ಮಂಡಿಸಿ ಪದವಿ ಪಡೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ .ಇದನ್ನು ನಾವು ತಡೆಯಬೇಕಾಗಿದೆ ಇಲ್ಲವಾದರೆ ಶರಣ ಸ್ಮಾರಕಗಳ ಬಗ್ಗೆ ತಪ್ಪು ಮಾಹಿತಿ ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟಂತಾಗುತ್ತದೆ ಎಂದರು.
ಬಸವಕಲ್ಯಾಣ ಪರಿಸರದ ಶರಣ ಸ್ಮಾರಕಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪರಿಚಯಿಸಲು ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಅವಶ್ಯಕತೆ ಇದೆ .ಶರಣರ ನೈಜ ಚರಿತ್ರೆ ಪ್ರವಾಸಿಗರಿಗೆ ಪರಿಚಯಿಸಲು ಸ್ಥಳೀಯರಿಗೆ ತರಬೇತಿ ನೀಡುವ ಅವಶ್ಯಕತೆ ಇದೆ .ಶರಣ ಸ್ಮಾರಕಗಳ ಒಂದು ರೇಖಾ ಚಿತ್ರ ಪುಸ್ತಕ ಮತ್ತು ಛಾಯಾಚಿತ್ರ ಪುಸ್ತಕ ತಯಾರಿಸಿ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಲಭ್ಯವಾಗುವಂತೆ ಮಾಡಬೇಕು ಎಂದರು .
ಡಾ.ವಿಲಾಸ್ಪತಿ ಕುಬಾ ಅಧ್ಯಕ್ಷತೆ ವಹಿಸಿದ್ದರು. ಡಾ.ವೀರಣ್ಣ ದಂಡೆ ಸ್ವಾಗತಿಸಿದರು .ಡಾ.ಆನಂದ ಸಿದ್ಧಾಮಣಿ ವಂದಿಸಿದರು. ಡಾ.ಲಿಂಗಬಸವ ಪಾಟೀಲ್, ಡಾ.ಕಲ್ಲಪ್ಪ ವಾಲಿ ಉಪಸ್ಥಿತರಿದ್ದರು.