ಬೀದರ:ಜು.೧: ದಿ.ನಾರಂಜಾ ಸಹಕಾರಿ ಸಕ್ಕರೆ ಕಾಖಾನೆ ನಿಯಮಿತ ಇಮಾಪೂರ ಕಾರ್ಖಾನೆಗೆ ೨೦೨೪-೨೫ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರ ಕಬ್ಬಿನ ಬಾಕಿ ಬಿಲ್ಲ ೨೦,೯೮,೦೦,೦೦೦ ರೂ.ಗಳನ್ನು ರೈತರಿಗೆ ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಜಿಲ್ಲಾದಿಕಾರಿ ಶಿಲ್ಪಾ ಶಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಬೀದರ ಇವರ ಆದೇಶದ ಪ್ರಕಾರ ದಿ.ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಇಮಾಪೂರ ಕಾರ್ಖಾನೆಗೆ ೨೦೨೪-೨೫ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರ ಕಬ್ಬಿನ ಬಿಲ್ಲು ಪಾವತಿಸದೇ ಇರುವುದರಿಂದ ಭೂಕಂದಾಯದಡಿ ವಸೂಲಿ ಪ್ರಮಾಣ ಪತ್ರವನ್ನು ಹೊರಡಿಸಲಾಗಿರುತ್ತದೆ. ಅದರಂತೆ ತಹಸೀಲ್ದಾರರು ಬೀದರ ಇವರು ಸದರಿ ಕಾರ್ಖಾನೆಯಲ್ಲಿರುವ ೬೫೦೦೦ (S.೩೦) ಕ್ವಿಂಟಲ್ ಸಕ್ಕರೆಯನ್ನು ಜಪ್ತಿ ಮಾಡಿರುತ್ತಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಇವರು ಮನವಿ ನೀಡಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಿಲ್ಲು ಪಾವತಿಸಲು ಒತ್ತಾಯಿಸಿದರು. ಸದರಿ ಸಕ್ಕರೆ ಕಾರ್ಖಾನೆಯಲ್ಲಿ ಜಪ್ತಿ ಮಾಡಿರುವ ೬೫೦೦೦ (S.೩೦) ಕ್ವಿಂಟಲ್ ಸಕ್ಕರೆಯನ್ನು ಮಾರಾಟ ಮಾಡಿ ರೈತರ ಕಬ್ಬಿನ ಸಂಪೂರ್ಣ ಬಿಲ್ಲು ಪಾವತಿ ಮಾಡಲು ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರ ಅನುಮತಿಯನ್ನು ಪಡೆದು ಸದರಿ ಕಾರ್ಖಾನೆಯಲ್ಲಿರುವ ೬೫೦೦೦ (S.೩೦) ಕ್ವಿಂಟಲ್ ಸಕ್ಕರೆಯನ್ನು ಮಾರಾಟ ಮಾಡಿ ರೈತರ ಬಾಕಿ ಪಾವತಿ ಮೊತ್ತ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.