100 ಬುದ್ಧ ವಿಹಾರಗಳಿಗೆ ತಲಾ ಒಂದು ಕೋಟಿ ಅನುದಾನ: ಬಜೆಟ್‍ನಲ್ಲಿ ಘೋಷಣೆಗೆ ಸಿಎಂ ಸಿದ್ದರಾಮಯ್ಯ ಭರವಸೆ

ಜೇವರ್ಗಿ,ಫೆ.19-ಸುಮಾರು 100 ಬುದ್ಧ ವಿಹಾರಗಳಿಗೆ ತಲಾ ಒಂದು ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ನಿಗದಿಗೊಳಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಭಾರತೀಯ ಬೌದ್ಧ ಮಹಾ ಸಭಾ ತಾಲೂಕು ಉಪಾಧ್ಯಕ್ಷ ಮತ್ತು ವಕೀಲರು ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ಅಲ್ಪಸಂಖ್ಯಾತರ ಪೂರ್ವಭಾವಿ ಬಜೆಟ್ ಸಭೆ ನೇತೃತ್ವ ವಹಿಸಿ ಅವರು ಈ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಇಸ್ಲಾಂ, ಸಿಖ್, ಜೈನ,ಬೌದ್ಧಗಳ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನ ಆನಂದಭಂತೆ ಮಹಾಬೋಧಿ, ಆಣದೂರಿನ ಬುದ್ಧ ವಿಹಾರದ ವರಜೋತಿ ಭಂತೆ, ಬುದ್ಧದತ್ತ ಭಂತೆ ಅವರು ಹಲವು ಬೇಡಿಕೆಗಳನ್ನು ಮಂಡಿಸಿದರು.
ಬೌದ್ಧರ ನಿಗಮ ಸ್ಥಾಪನೆ, ಬೌದ್ಧರಿಗೆ 100 ಕೋಟಿ ಅನುದಾನ, ಭಗವಾನ್ ಗೌತಮ ಬುದ್ಧರ ಜಯಂತಿಗೆ ರಜೆ ಘೋಷಿಸಬೇಕು. ಬೌದ್ಧರ ಆಯೋಗಸ್ಥಾಪನೆ ಸನ್ನತಿ ಮತ್ತು ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾನಿಲಯಕ್ಕೆ ವಿಶೇಷ 5 ಕೋಟಿ ಅನುದಾನ, ಪಾಲಿ ಭಾಷೆ ಅಧ್ಯಯನ ಮತ್ತು ಗ್ರಂಥಗಳ ಪ್ರಕಾಶನಕ್ಕೆ ಅನುದಾನ, ಕರ್ನಾಟಕ ರಾಜ್ಯದಲ್ಲಿ ಸುಮಾರು 127 ಬೌದ್ಧ ವಿಹಾರಗಳಿವೆ. ಅದರಲ್ಲಿ 100 ವಿಹಾರಗಳಿಗೆ ತಲಾ ಒಂದು ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದರು ಎಂದು ಅವರು ತಿಳಿಸಿದ್ದಾರೆ.