
ನವದೆಹಲಿ, ಮಾ.೨೭: ತೈಲದ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸಕಾರ ಇಳಿಕೆ ಮಾಡುವ ಮೂಲಕ ಪೆಟ್ರೋಲ್ , ಡಿಸೇಲ್ ಬೆಲೆ ಏರಿಕೆಯ ಆತಂಕದಲ್ಲಿದ್ದ ಜನರಿಗೆ ನಿರಾಳ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಚಿಲ್ಲರೆ ಮಾರಾಟದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಆತಂಕ ಸೃಷ್ಟಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ತೈಲದ ಅಬಕಾರಿ ಸುಂಕ ಇಳಿಕೆ ಮಾಡುವ ಮೂಲಕ ಬೆಲೆ ಏರಿಕೆ ಹೊರೆಯಿಂದ ಜನರನ್ನು ಮುಕ್ತ ಮಾಡಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್‌ಗೆ ೩ ರೂಗಳಿಗೆ ಹಾಗೂ ಪ್ರತಿ ಲೀಟರ್ ಡೀಸೆಲ್‌ಗೆ ಶೂನ್ಯ ಇಳಿಕೆ ಮಾಡಿದೆ. ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ಗೆ ೧೩ ರೂ. ಹಾಗೂ ಪ್ರತಿ ಡೀಸೆಲ್ ಗೆ ೧೦ ರೂ. ಅಬಕಾರಿ ಸುಂಕ ಇತ್ತು.
ಜಾಗತಿಕ ಕಚ್ಚಾ ತೈಲ ಬೆಲೆ ಎರಡು ಪಟ್ಟು ಏರಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಹೆಚ್‌ಪಿ ಮತ್ತು ಬಿಪಿ, ಪೆಟ್ರೋಲಿಯಂ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದು ಅನಿವಾರ್ಯ ಎನಿಸಿತ್ತು. ಇದನ್ನು ತಪ್ಪಿಸಲು ಜೊತೆಗೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಾಗದಿರಲು ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವುದಿಲ್ಲ. ಆದರೆ ಪೆಟ್ರೋಲಿಯಂ ಕಂಪನಿಗಳಿಗೆ ನಷ್ಟ ಹೊರೆ ಇಳಿಸಲು ಸಹಾಯವಾಗಲಿದೆ. ಜೊತೆಗೆ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿಯು ತಪ್ಪಲಿದೆ.
ಈ ಕಡಿತದಿಂದ ಸಾಮಾನ್ಯ ಗ್ರಾಹಕರಿಗೆ ತಕ್ಷಣದ ಬೆಲೆ ಇಳಿಕೆ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಸುಮಾರು ೪೮.೮ ನಷ್ಟ ಅನುಭವಿಸುತ್ತಿರುವುದರಿಂದ, ಸುಂಕ ಕಡಿತದ ಪ್ರಯೋಜನವನ್ನು ಅವರು ತಮ್ಮ ನಷ್ಟವನ್ನು ಸಮತೋಲನಗೊಳಿಸಲು ಬಳಸುವ ಸಾಧ್ಯತೆ ಇದೆ.
ಜಾಗತಿಕ ತೈಲದ ಬೆಲೆ ಕಳೆದ ತಿಂಗಳಲ್ಲಿ ೭೦ ಡಾಲರ್ ರಿಂದ ೧೨೨ ಡಾಲರ್‌ರವರೆಗೆ ಏರಿಕೆಯಾಗಿದೆ. ಇದರಿಂದ ವಿಶ್ವದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ೨೦ರಿಂದ ೫೦ ಶೇಕಡಾ ಏರಿಕೆ ಕಂಡಿವೆ. ಕೇಂದ್ರ ಸರ್ಕಾರ ಜನರ ಮೇಲೆ ಹೆಚ್ಚಿನ ಭಾರ ಹಾಕುವುದನ್ನು ತಪ್ಪಿಸಲು ತನ್ನದೇ ಆದ ಹಣಕಾಸಿನ ಮೇಲೆ ಹೊರೆ ಹೊತ್ತಿದೆ” ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ತೈಲದ ಬೆಲೆ ಭಾರೀ ಏರಿಕೆಯಾಗಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ, ಹಾರ್ಮುಜ್ ಜಲಸಂಧಿ ನಿರ್ಬಂಧದ ಕಾರಣದಿಂದ ಬ್ರೆಂಟ್ ಕ್ರೂಡ್ ಬೆಲೆ ಬ್ಯಾರೆಲ್‌ಗೆ ೧೦೦ ಡಾಲರ್ ದಾಟಿ ೧೨೨ ಡಾಲರ್‌ರವರೆಗೆ ಏರಿಕೆಯಾಗಿದೆ.
ದೇಶದ ಖಾಸಗಿ ಇಂಧನ ಮಾರಾಟ ಕಂಪನಿ ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ೫ರೂ. ಮತ್ತು ಡೀಸೆಲ್ ಬೆಲೆಯನ್ನು ೩ರೂ. ಹೆಚ್ಚಿಸಿದ್ದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರಾಟ ಮಾಡುವ ಪೆಟ್ರೋಲ್, ಡೀಸೆಲ್ ಬೆಲೆಏರಿಕೆಯು ಆಗಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ತೈಲದ ಅಬಕಾರಿ ಸುಂಕ ಇಳಿಕೆಯಿಂದ ಈಗ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಯತಾಸ್ಥಿತಿಯಲ್ಲಿ ಇರಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಏರಿಕೆಯಾಗಲಿ, ಇಳಿಕೆಯಾಗಲಿ ಇರುವುದಿಲ್ಲ.
ಅಬಕಾರಿ ಸುಂಕ ಕಡಿತದಿಂದ ಸರ್ಕಾರದ ಹಣಕಾಸಿನ ಮೇಲೆ ಒತ್ತಡ ಹೆಚ್ಚಿದರೂ, ಗ್ರಾಹಕರಿಗೆ ತಕ್ಷಣದ ಬೆಲೆ ಇಳಿಕೆ ಸಾಧ್ಯತೆ ಕಡಿಮೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ಇಂಧನ ಸರಬರಾಜಿನಲ್ಲಿ ಮಹತ್ವದ ಪಾತ್ರವಹಿಸುತ್ತದೆ. ವಿಶ್ವದ ಸುಮಾರು ೨೦-೨೫ ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪ್ರತಿದಿನ ಈ ಮಾರ್ಗದ ಮೂಲಕ ಸಾಗುತ್ತದೆ. ಭಾರತವೂ ತನ್ನ ಕಚ್ಚಾ ತೈಲ ಆಮದುಗಳ ೪೦-೫೦ ಶೇಕಡಾವರೆಗೆ ಈ ಮಾರ್ಗದ ಮೇಲೆ ಅವಲಂಬಿತವಾಗಿದೆ.
ಇದರಿಂದ ದೇಶದಲ್ಲಿ ಇಂಧನ ಕೊರತೆಯ ಭೀತಿ ಮೂಡಿದ್ದರೂ, ಸರ್ಕಾರ ಯಾವುದೇ ತುರ್ತು ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದಲ್ಲಿ ಸುಮಾರು ೬೦ ದಿನಗಳ ಕಚ್ಚಾ ತೈಲ ಸಂಗ್ರಹ ಮತ್ತು ೩೦ ದಿನಗಳ ಎಲ್‌ಪಿಜಿ ಸಂಗ್ರಹ ಲಭ್ಯವಿದೆ ಎಂದು ತಿಳಿಸಿದೆ.
ಇದಲ್ಲದೆ, ಭಾರತ ತೈಲ ಮತ್ತು ಎಲ್‌ಪಿಜಿ ಆಮದುಗಳನ್ನು ವಿಭಿನ್ನ ದೇಶಗಳಿಂದ ಹೆಚ್ಚಿಸಲು ಒಪ್ಪಂದಗಳನ್ನು ವೇಗಗೊಳಿಸಿದೆ. ಒಟ್ಟು ತೈಲ ಸಂಗ್ರಹವು ೭೪ ದಿನಗಳಿಗೆ ಸಾಕಾಗುವಷ್ಟು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲಾಕ್‌ಡೌನ್ ಪ್ರಸ್ತಾಪವಿಲ್ಲ: ಹರ್‌ದೀಪ್ ಸಿಂಗ್’
ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿರುವುದರಿಂದ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬುದು ಶುದ್ಧ ಸುಳ್ಳು. ಅಂತಹ ಯಾವುದೇ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.’
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಮಾಡಿರುವ ಅವರು, ತೈಲ, ಇಂಧನ ಹಾಗೂ ಇತರ ಅಗತ್ಯ ಸರಕುಗಳ ಸರಬರಾಜನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ ಎಂದಿದ್ದಾರೆ.
ಇಂತಹ ಜಾಗತಿಕ ಅನಿಶ್ಚಿಕತೆ ಎದುರಾದಾಗ ಭಾರತ ಈ ಹಿಂದೆಯೂ ಪುಟಿದೇಳುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅದೇ ರೀತಿ ಅಗತ್ಯಕ್ಕೆ ತಕ್ಕಂತೆ ಪೂರ್ವ ಸಿದ್ಧತೆ ಮತ್ತು ಸಂಘಟನಾತ್ಮಕವಾಗಿ ಭಾರತ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ಹಾಗೂ ಸಮಸ್ಯೆ ಸೃಷ್ಟಿಸುವಂತಹ ವದಂತಿಗಳನ್ನುಯಾರೂ ಹರಡಬಾರದು. ಕೇಂದ್ರ ಸಚಿವರು ಹರ್‌ದೀಪ್ ಸಿಂಗ್ ಪುರಿ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲೂ ತೈಲ ಸುಂಕ ಇಳಿಕೆ ಸುಳಿವು
ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡುವ ಸುಳಿವನ್ನ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ನೀಡಿದ್ದಾರೆ ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲೂ ಸುಂಕ ಇಳಿಸುತ್ತೀರಾ ಅಂದ್ರೆ ಪ್ರಶ್ನೆಗೆ ಈ ಬಗ್ಗೆ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಕಡಿತ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಅಗತ್ಯ ಬಿದ್ದರೆ ಚರ್ಚೆ ಚರ್ಚೆ ಮಾಡುತ್ತೇವೆ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.






























