
ತುಮಕೂರು/ಪಾವಗಡ, ಮಾ. ೨೧- ಮೇಲಾಧಿಕಾರಿಯ ಕಿರುಕುಳಕ್ಕೆ ನೊಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ (೬೦) ಅವರು ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅಧಿಕಾರಿ.
ಕಳೆದ ಮೂರು ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್ ಅವರ ಸೇವಾ ಅವಧಿ ಈ ತಿಂಗಳ ೩೧ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ನಿವೃತ್ತಿಗೆ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.
ಯುಗಾದಿ ಹಬ್ಬದ ಮಾರನೇ ದಿನವಾದ ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದ ಮಲ್ಲಿಕಾರ್ಜುನ್ ಅವರು ಸಂಜೆವರೆಗೂ ಕಚೇರಿಯಲ್ಲೇ ಇದ್ದರು ಎಂದು ಹೇಳಲಾಗಿದೆ. ಸಂಜೆ ಕಚೇರಿಯ ಎಲ್ಲಾ ಸಿಬ್ಬಂದಿಗಳು ಮನೆಗೆ ತೆರಳಿದ ಬಳಿಕ ಕಚೇರಿಯ ಮೀಟಿಂಗ್ ಹಾಲ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ವಿಡಿಯೋ ಮಾಡಿದ್ದು, ಆ ವಿಡಿಯೋದಲ್ಲಿ ಇಲಾಖೆಯ ಮೇಲಾಧಿಕಾರಿಗಳ ಕಿರುಕಳದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮೂಲತಃ ಪಾವಗಡ ತಾಲ್ಲೂಕಿನ ಗುಂಡರ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮಲ್ಲಿಕಾರ್ಜುನ್ ಅವರ ನಿಧನದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಮುಂದೆ ತಾಯಿ ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಮನಕಲಕುವಂತಿವೆ.
ಮಲ್ಲಿಕಾರ್ಜುನ್ ಕೊನೆ ಮಾತು
ಆತ್ಮಹತ್ಯೆಗೆ ಶರಣಾಗುವ ಮುನ್ನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಅವರು ಮಾಡಿರುವ ವಿಡಿಯೋದಲ್ಲಿ ನಮ್ಮ ತಾಯಿ, ಹೆಂಡತಿ, ಮಕ್ಕಳು ನಮ್ಮ ಇಡೀ ಸಂಸಾರ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ, ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು. ಆದರೆ ಅದು ಆಗುತ್ತಿಲ್ಲ.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆಯಾಗಿರುವುದರಿಂದ ನಮ್ಮ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವನಿಗೆ ದೇವರು, ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಪಾವಗಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕಿರುಕುಳ ನೀಡಿಲ್ಲ: ಜಂಟಿ ನಿದೇರ್ಶಕ ಕೃಷ್ಣಪ್ಪ ಸ್ಪಷ್ಟನೆ

ಪಾವಗಡ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯನವರಿಗೆ ನಾನು ಒಂದು ದಿನವೂ ವೈಯುಕ್ತಿಕವಾಗಿ ತೊಂದರೆ ನೀಡಿಲ್ಲ ಎಂದು ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟಪಡಿಸಿರುವ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು, ಬೆಂಗಳೂರು ಕೇಂದ್ರ ಕಚೇರಿಯಿಂದ ಮಲ್ಲಿಕಾರ್ಜುನ್ ರವರು ಇಲಾಖೆಯಲ್ಲಿ ಅಕ್ರಮ ಮಾಡಿದ್ದಾರೆ ಎಂಬ ದೂರು ಅರ್ಜಿಯೊಂದಿಗೆ ಪತ್ರ ಬಂದಿತ್ತು. ಆ ಪತ್ರದ ಆಧಾರದ ಮೇಲೆ ನಾನು ಅವರಿಗೆ ನೋಟಿಸ್ ನೀಡಿದ್ದೆ ಎಂದು ಹೇಳಿದ್ದಾರೆ.
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಕಿರುಕುಳ ನೀಡಿರುವುದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ೭ ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು, ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರ ನಿವೃತ್ತಿಗೆ ಕೇವಲ ೧೦ ದಿನಗಳು ಮಾತ್ರ ಬಾಕಿ ಇತ್ತು. ನಾನು ಒಂದು ದಿನವೂ ಅವರಿಗೆ ಕಿರುಕುಳ ಕೊಟ್ಟಿಲ್ಲ. ನಮ್ಮಿಂದ ತೊಂದರೆಯಾಗಿದ್ದರೆ ಕಚೇರಿಯ ಸಿಬ್ಬಂದಿಗಳು ಖಂಡಿತವಾಗಿಯೂ ಬಹಿರಂಗಪಡಿಸಬಹುದು. ನಮ್ಮ ಇಲಾಖೆಯಲ್ಲಿ ಎಲ್ಲರಿಗೂ ಸಹಕಾರ ಕೊಡುತ್ತಾ ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನಯ್ಯನವರು ಅಕ್ರಮ ಮಾಡಿದ್ದಾರೆ ಎಂಬ ದೂರು ಅರ್ಜಿಯೊಂದಿಗೆ ಬೆಂಗಳೂರು ಕೇಂದ್ರ ಕಚೇರಿಯಿಂದ ಪತ್ರ ಬಂದಿತ್ತು. ಆ ಪತ್ರದ ಆಧಾರದ ಮೇಲೆ ನಾನು ಅವರಿಗೆ ನೋಟಿಸ್ ಕೊಟ್ಟಿದ್ದು ನಿಜ. ಆ ದೂರಿನ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿದ್ದೆ. ಆದರೆ ಇನ್ನು ತನಿಖೆ ಆರಂಭಿಸಿರಲಿಲ್ಲ. ಇದನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ನಾನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಲ್ಲಿಕಾರ್ಜುನ್ ರವರ ನಿವೃತ್ತಿಗೆ ಕೇವಲ ೧೦ ದಿನಗಳು ಮಾತ್ರ ಇರುವುದರಿಂದ ಅವರಿಗೆ ತೊಂದರೆ ಕೊಟ್ಟು ಅವರ ಪಿಂಚಣಿ ನಿಲ್ಲಿಸುವಂತಹ ಅವಕಾಶವೂ ಇರುವುದಿಲ್ಲ. ಇವರ ಪಿಂಚಣಿಗೆ ಸಹಾಯವಾಗುವಂತೆ ತೃಪ್ತಿಕರವಾಗಿ ಪ್ರಸ್ತಾವನೆಯನ್ನು ಸ್ವತಃ ನಾನೇ ದೃಢೀಕರಿಸಿ ಕೊಟ್ಟಿದ್ದೇನೆ. ಇವರ ಆತ್ಮಹತ್ಯೆ ಅನುಮಾನ ಮೂಡಿಸುತ್ತಿದೆ. ಇವರ ಸಾವಿನ ಕುರಿತು ಸತ್ಯಾಸತ್ಯತೆಯನ್ನು ಹೊರಗೆ ತರಬೇಕು ಎಂದು ಮನವಿ ಮಾಡುವುದಾಗಿ ಜಂಟಿ ನಿರ್ದೇಶಕ ಕೃಷ್ಣಪ್ಪ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.






























