
ಕಲಬುರಗಿ,ಫೆ.19-ನಗರದ ಸಬ್-ಅರ್ಬನ್ ಪೊಲೀಸರು ಇಬ್ಬರು ಅಂತರರಾಜ್ಯ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ 12.60 ಲಕ್ಷ ರೂ.ಮೌಲ್ಯದ 14 ಬೈಕ್‍ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನೆ ಮುಂದೆ ನಿಲ್ಲಿಸಿದ ಬೈಕ್ ಕಳವಾಗಿದೆ ಎಂದು ನಗರದ ಮಹಾಲಕ್ಷ್ಮೀ ಲೇಔಟ್‍ನ ರೋಹಿತ್ ಕೋಲಾರ್ಕರ್ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಪ್ರವೀಣ್ ಹೆಚ್.ನಾಯಕ್ ಮತ್ತು ಸಬ್-ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ ಅವರ ನೇತೃತ್ವದಲ್ಲಿ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ವೆಂಕಟರೆಡ್ಡಿ, ಮಲ್ಲಿಕಾರ್ಜುನ, ಸುಲ್ತಾನ್, ಮಂಜುನಾಥ, ಫಿರೋಜ್, ಅನೀಲ ಮತ್ತು ಹಣಮಂತ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ನಗರದ ಕಪನೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಗರದ ಮೋಮಿನಪುರ ಗೋಳಾ ಚೌಕ್‍ನ ಮೊಹ್ಮದ್ ನಾಸೀರ್ (24) ಮತ್ತು ಮಿಲ್ಲತ್ ನಗರದ ಮಹ್ಮದ್ ಆರೀಫ್ (19) ಅವರನ್ನು ಬಂಧಿಸಿ 12.60 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 14 ಬೈಕ್ ಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.
ಅಂತರರಾಜ್ಯ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.

























