
ಬೆಂಗಳೂರು, ಮಾ. ೧೦- ಸದನದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸರ್ಕಾರಕ್ಕೆ ಸೂಚನೆ ನೀಡಿದರು.
ಪ್ರಶ್ನೋತ್ತರ ಸಂದರ್ಭದಲ್ಲಿ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಸಿಗದ ಬಗ್ಗೆ ಬಿಜೆಪಿಯ ಸುರೇಶ್‌ಕುಮಾರ್ ರವರು ಆಕ್ಷೇಪ ಎತ್ತಿದ್ದನ್ನು ಸಮರ್ಥಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ನಿನ್ನೆ ಸಹ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರಗಳ ಸಂಖ್ಯೆ ಕಡಿಮೆ ಇತ್ತು.
ಇಂದು ಸಹ ಅದೇ ಆಗಿದೆ. ಈ ರೀತಿ ಆಗುವುದು ಸರಿಯಲ್ಲ. ಸಚಿವರುಗಳು ತಮ್ಮ ಇಲಾಖಾಧಿಕಾರಿಗಳಿಗೆ ಸೂಚನೆ ಕೊಡಬೇಕು. ಸದನದಲ್ಲಿ ಶಾಸಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ತಡ ಮಾಡದೆ ಉತ್ತರಗಳು ಸದನಕ್ಕೆ ಬರಬೇಕು. ಉತ್ತರಗಳು ಸಿದ್ದಪಡಿಸಿ ಕೊಡುವುದಕ್ಕೆ ಐಎಎಸ್-ಐಪಿಎಸ್ ಆಗಬೇಕಾ, ಸದನಕ್ಕೆ ಉತ್ತರ ಕೊಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಸಭಾಧ್ಯಕ್ಷರ ಮಾತಿಗೆ ಸ್ಪಂದಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ಸದನದಲ್ಲಿ ಶಾಸಕರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲೇಬೇಕು. ಉತ್ತರವನ್ನು ವಿಳಂಬ ಮಾಡದೇ ನೀಡುವಂತೆ ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಸದನಕ್ಕೆ ಉತ್ತರ ಕೊಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.





























