
ವ್ಯಾಪಕ ಭದ್ರತೆ
ಬೆಂಗಳೂರು, ಮಾ. ೨೬- ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯಂ ಲೀಗ್ ಆರಂಭಕ್ಕೆ ಎರಡು ದಿನ ಬಾಕಿ ಉಳಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಸನ್‌ರೈಸರ್ ಹೈದರಾಬಾದ್ ಉದ್ಘಾಟನೆ ಪಂದ್ಯ ಈ ತಿಂಗಳು ೨೮ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆ ಕುರಿತಂತೆ ಅಣುಕು ಪ್ರದರ್ಶನ ನಡೆಸಲಾಯಿತು.
ಈ ಉದ್ಘಾಟನಾ ಪಂದ್ಯಕ್ಕೆ ಯಾವುದೇ ಅಡೆತಡೆಯಿಲ್ಲದೆ ಸುಗಮ ನಿರ್ವಹಣೆ ಮತ್ತು ಭದ್ರತೆಗೆ ಪೋಲಿಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡುವ ದೃಷ್ಟಿಯಿಂದ ಈ ಅಣುಕು ಪ್ರದರ್ಶನ ನಡೆಸಲಾಗಿದೆ.
ಬೆಳಿಗ್ಗೆಯಿಂದ ಆರಂಭವಾದ ಈ ಅಣುಕು ಪ್ರದರ್ಶನದಲ್ಲಿ ಬೆಂಗಳೂರು ಪೋಲಿಸರ ಜೊತೆ ರಾಷ್ಟ್ರೀಯ ಭದ್ರತಾ ಪಡೆ ಕೈ ಜೋಡಿಸಿದೆ. ಒಂದು ಸಾವಿರಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ಈ ಅಣುಕು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಕ್ರೀಡಾಂಗಣದ ಒಳಗಡೆ ಮತ್ತು ಹೊರಗಡೆ ಬಿಗಿ ಭದ್ರತೆ ಹೇಗೆ ಕಾಪಾಡಬೇಕೆಂಬ ಬಗ್ಗೆ ಪ್ರಾತ್ಯಕ್ಷಿತೆ ನಡೆಸಲಾಯಿತು.
ಕ್ರೀಡಾಂಗಣದ ಗೇಟ್ ಗಳಲ್ಲಿ ಭದ್ರತಾ ತಪಾಸಣೆ ಹೇಗಿರಬೇಕು. ತುರ್ತುಸಂದರ್ಭಗಳಲ್ಲಿ ಜನರನ್ನು ಹೇಗೆ ಹೊರಗೆ ತರಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಬರುವ ಕ್ರಿಕೆಟ್ ಅಭಿಮಾನಿಗಳನ್ನು ನಿಯಂತ್ರಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಬಗ್ಗೆ ಅಣುಕು ಪ್ರದರ್ಶನದ ವೇಳೆ ಪೋಲಿಸರಿಗೆ ತರಬೇತಿ ನೀಡಲಾಯಿತು.
ಪಂದ್ಯ ನಡೆಯುವ ಸಮಯದಲ್ಲಿ ಕ್ರೀಡಾಂಗಣದ ಸುತ್ತಮುತ್ತ ಉಂಟಾಗುವ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವಿಶೇಷ ಯೋಜನೆಯೊಂದನ್ನು ಸಂಚಾರಿ ಪೋಲಿಸರು ಸಿದ್ಧಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಸಿ ಅಕ್ಷಯ್, ಮಾ. ೨೮ ರಂದು ನಡೆಯಲಿರುವ ಪಂದ್ಯಕ್ಕೆ ಸಂಪೂರ್ಣ ಭದ್ರತೆ ಒದಗಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ಕಳೆದ ಬಾರಿಗಿಂತ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕಬ್ಬನ್ ರಸ್ತೆಯಲ್ಲಿರುವ ಪ್ರವೇಶ ದ್ವಾರಗಳನ್ನು ವಿಸ್ತರಿಸಲಾಗಿದ್ದು ಪ್ರೇಕ್ಷಕರು ಸುಗಮ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರಿಗೂ ಫುಟ್‌ಬಾತ್ ಮೇಲೆ ನಿಲ್ಲಲು ಅವಕಾಶ ಇಲ್ಲ ಎಂದು ಹೇಳಿದರು.
ಪೋಲಿಸ್ ಇಲಾಖೆ ಜೊತೆ ಲೋಕೋಪಯೋಗಿ ಇಲಾಖೆ,ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಕಳೆದ ವರ್ಷ ಆರ್ ಸಿಬಿ, ಚಾಂಪಿಯನ್ ಪಟ್ಟ ಅಲಂಕರಿಸಿ ಬೆಂಗಳೂರಿಗೆ ಆರ್ ಸಿಬಿ ಬಂದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ೧೧ ಮಂದಿ ಬಲಿಯಾಗಿದ್ದರು. ಇಂತಹ ಅವಘಡಗಳು ತಡೆಯಲು ಪೋಲಿಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.































