ಶಾಸಕ ಭೈರತಿ ಬಸವರಾಜ್ ಕೋರ್ಟ್ ಗೆ ಹಾಜರು

ಬೆಂಗಳೂರು,ಫೆ.೧೩-ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಬಂಧಿತ ಮಾಜಿ ಸಚಿವ ಹಾಗೂ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.


ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಬಂಧಿಸಿ ಸಿಐಡಿಯ ಕೇಂದ್ರ ಕಚೇರಿಗೆ ಕರೆತಂದ ಅಧಿಕಾರಿಗಳು ಅಲ್ಲಿಯೇ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣದ ಸಂಬಂಧ ವಿಚಾರಣೆ ಕೈಗೊಂಡರು.


ಪ್ರಾಥಮಿಕ ವಿಚಾರಣೆಯ ಬಳಿಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.


ಕೋರ್ಟ್‌ನಲ್ಲಿ ಹೆಚ್ಚಿನ ವಿಚಾರಣೆಗಾಗಿ ಬಸವರಾಜ್ ಅವರನ್ನು ೧೪ ರಿಂದ ಕನಿಷ್ಠ ಐದು ದಿನ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗಿದೆ. ಪ್ರಕರಣದ ಆರೋಪಿಗಳಾದ ಅಜಿತ್, ಬೈರತಿ ಬಸವರಾಜ್ ಇಬ್ಬರು ಕೊಲೆಯಾದ ಬಿಕ್ಲು ಶಿವ ಮಧ್ಯೆ ಸಾಕಷ್ಟು ವ್ಯವಹಾರ ಬಗ್ಗೆ ಮಾಹಿತಿ ಇದೆ. ಈ ವಿಚಾರದ ಬಗ್ಗೆ ತನಿಖೆ ನಡೆಸಲು ಕಸ್ಟಡಿಗೆ ಕೇಳಲು ಅಧಿಕಾರಿಗಳು ಮುಂದಾಗಿದ್ದಾರೆ.


ಕೊಲೆಯಾದ ರೌಡಿಶೀಟರ್ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಆರೋಪಿ ಜಗದೀಶ್ ನನಗೆ ಪರಿಚಯ ಇಲ್ಲ ಎಂದು ಭೈರತಿ ಬಸವರಾಜ್ ಹೇಳಿದ್ದರು. ಆದರೆ ಜಗದೀಶ್ ಜೊತೆ ಕಾರ್ಯಕ್ರಮಗಳು, ಹುಟ್ಟುಹಬ್ಬ, ದೇವಸ್ಥಾನ ಗಳಿಗೆ ಜೊತೆಗೆ ಹೋಗಿರುವುದು ಪತ್ತೆಯಾಗಿದೆ.


ಈ ಹಿಂದೆಯೇ ಬೈರತಿ ಬಸವರಾಜ್ ಮತ್ತು ಬಿಕ್ಲು ಶಿವನಿಗೆ ಹಲವು ಬಾರಿ ಜಮೀನು ವಿವಾದಗಳಲ್ಲಿ ಗಲಾಟೆ ಆಗಿತ್ತು. ಇದಕ್ಕೆ ಪೂರಕವಾಗಿ ಅವಲಹಳ್ಳಿ, ಕೆಆರ್ ಪುರ, ಭಾರತೀನಗರ ಪೊಲೀಸ್ ಠಾಣೆಯಲ್ಲಿ ಭೈರತಿ ಬಸವರಾಜ್ ವಿರುದ್ಧ ದೂರು ದಾಖಲಾಗಿತ್ತು.


ಮತ್ತೊಬ್ಬನ ಬಂಧನ:


ಬಿಕ್ಲು ಶಿವ ಕೊಲೆ ಸಂಬಂಧ ಮಲಯಾಳಿ ಅಜಿತ್ ಎಂಬ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ೨೦ ಆರೋಪಿಯಾಗಿರುವ ಮಲಯಾಳಿ ಅಜಿತ್ ಜಾಮೀನುನನ್ನು ನಿನ್ನೆ ರದ್ದುಪಡಿಸಿ ಕೋರ್ಟ್ ಸಿಐಡಿ ವಶಕ್ಕೆ ನೀಡಿತ್ತು.