
ಕಲಬುರಗಿ,ಏ.7-ನಗರದ ಹೈಕೋರ್ಟ್ ರಸ್ತೆಯಲ್ಲಿರುವ ಏಷಿಯನ್ ಗ್ರೀನ್‍ಪಾರ್ಕ್ ಲೇಔಟ್‍ನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮಹಾನಗರ ಪಾಲಿಕೆ ಮತ್ತು ನಂದಿಕೂರ ಗ್ರಾಮ ಪಂಚಾಯತಿ ಮೀನಾಮೇಷ ಎಣಿಸುತ್ತಿವೆ.
ಒಳಚರಂಡಿ ವ್ಯವಸ್ಥೆ, ಸರಿಯಾದ ರಸ್ತೆ ಇಲ್ಲದೆ ಲೇಔಟ್ ನಿವಾಸಿಗಳು ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಲೇಔಟ್‍ಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ನಿವಾಸಿಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಲೇಔಟ್ ಪಾಲಿಕೆ ವ್ಯಾಪ್ತಿಯಲ್ಲಿ ಬರವುದಿಲ್ಲ ಎಂದು, ನಂದಿಕೂರ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೆ ಅಗತ್ಯವಾದ ಅನುದಾನದ ಕೊರತೆ ಇದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇತ್ತ ಮಹಾನಗರ ಪಾಲಿಕೆ, ಅತ್ತ ನಂದಿಕೂರ ಗ್ರಾಮ ಪಂಚಾಯತಿ ಲೇಔಟ್‍ಗೆ ಒಳಚರಂಡಿ ವ್ಯವಸ್ಥೆ, ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸದೇ ಇರುವುದರಿಂದ ಲೇಔಟ್ ನಿವಾಸಿಗಳು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.
ಮಹಾನಗರ ಪಾಲಿಕೆ ಮತ್ತು ನಂದಿಕೂರ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾದರೆ ಯಾರ ಮುಂದೆ ಸಮಸ್ಯೆ ಹೇಳಿಕೊಳ್ಳಬೇಕು ಎಂಬುದು ಇಲ್ಲಿನ ನಿವಾಸಿಗಳ ಪ್ರಶ್ನೆಯಾಗಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನಂದಿಕೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಿ ಲೇಔಟ್‍ಗೆ ಒಳಚರಂಡಿ ಮತ್ತು ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಲೇಔಟ್ ನಿವಾಸಿಗಳು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆ ಮತ್ತು ನಂದಿಕೂರ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಲೇಔಟ್ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವರೆ ಎಂಬುವುದನ್ನು ಕಾದು ನೋಡಬೇಕಾಗಿದೆ.
………….
ಕಳ್ಳರ ಹಾವಳಿ
ಏಷಿಯನ್ ಗ್ರೀನ್‍ಪಾರ್ಕ್ ಲೇಔಟ್ ಒಳಗಡೆ ಮನೆಯ ಮುಂದೆ ನಿಲ್ಲಿಸಲಾದ ಬೈಕ್‍ಗಳಿಂದ ಕಳ್ಳರು ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಪ್ರಕರಣಗಳು ಅನೇಕ ಬಾರಿ ನಡೆದಿವೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ರಾತ್ರಿ ವೇಳೆ ಲೇಔಟ್ ಒಳಗೆ ನುಗ್ಗಿ ಮನೆ ಮುಂದೆ ನಿಲ್ಲಿಸಲಾದ ಬೈಕ್‍ಗಳಿಂದ ಪೆಟ್ರೋಲ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಲೇಔಟ್ ನಿವಾಸಿಗಳು ಆಗ್ರಹಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳು ಗಮನ ಹರಿಸಿ ಕಳ್ಳರ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕಿದೆ.
………….
ಸಮಸ್ಯೆಗೆ ಸ್ಪಂದಿಸದ ಶಾಸಕರು
ಏಷಿಯನ್ ಗ್ರೀನ್‍ಪಾರ್ಕ್ ಲೇಔಟ್‍ಗೆ ಮೂಲಭೂತ ಸೌಕರ್ಯ ಒದಿಸುವಂತೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಮಾಡಿಕೊಂಡರು ಇದುವರೆಗೆ ಅವರು ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಲೇಔಟ್ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೇಔಟ್ ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಶಾಸಕರು ಲೇಔಟ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನು ಮುಂದಾದರು ಲೇಔಟ್ ನಿವಾಸಿಗಳ ಬೇಡಿಕೆಗೆ ಶಾಸಕರು ಸ್ಪಂದಿಸಿ ಲೇಔಟ್‍ಗೆ ಒಳಚರಂಡಿ ಮತ್ತು ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
……………….
ಏಷಿಯನ್ ಗ್ರೀನ್‍ಪಾರ್ಕ್ ಲೇಔಟ್‍ಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಲೇಔಟ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸದೇ ಇರುವ ಪಕ್ಷದ ಅಭ್ಯರ್ಥಿಗಳಿಗೆ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ಇರಲು ಮತ್ತು ಮೂಲಭೂತ ಸೌಕರ್ಯ ಒದಗಿಸುವ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡಲು ನಿವಾಸಿಗಳು ನಿರ್ಧರಿಸಿದ್ದಾರೆ.
………….






















