ಮುಸುಕುಧಾರಿ ಚಿನ್ನಯ್ಯಗೆ ಬಿಡುಗಡೆ ಭಾಗ್ಯ

ಶಿವಮೊಗ್ಗ, ಡಿ.೧೮-ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾಗಿದ್ದ ಮುಸುಕುಧಾರಿ ವ್ಯಕ್ತಿ ಎಂದೇ ಖ್ಯಾತಿ ಪಡೆದಿದ್ದ ಸಿ.ಎನ್. ಚಿನ್ನಯ್ಯ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.


ಧರ್ಮಸ್ಥಳದಲ್ಲಿ ತಾನು ನೂರಾರು ಶವಗಳನ್ನ ಹೂತಿದ್ದೇನೆ ಎಂದು ಪೊಲೀಸರ ಎದುರು ಹಾಜರಾಗಿದ್ದ ಮುಸುಕುಧಾರಿ ಚೆನ್ನಯ್ಯ ಹಲವು ಜಾಗಗಳನ್ನ ತೋರಿಸಿದ್ದ. ಆದರೆ ಆತ ತೋರಿಸಿದ ಯಾವುದೇ ಜಾಗದಲ್ಲೂ ಶವ, ಅಸ್ಥಿಪಂಜರ ಸಿಕ್ಕಿರಲಿಲ್ಲ. ಅವನು ತೋರಿಸಿದ ಜಾಗದಲ್ಲೆಲ್ಲ ಜೆಸಿಬಿ ಮೂಲಕ ಅಗೆಸಲಾಗಿತ್ತು. ಆದರೆ ಬಳಿಕ ಅದೊಂದು ಕಟ್ಟುಕಥೆ ಎಂಬುದು ಗೊತ್ತಾಗಿತ್ತು. ಈ ಆರೋಪದಡಿ ಚಿನ್ನಯ್ಯ ಬಂಧಿತನಾಗಿದ್ದ. ಮುಸುಕುಧಾರಿ ಚಿನ್ನಯ್ಯನನ್ನ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು.
ಈ ಧರ್ಮಸ್ಥಳ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.


ನ್ಯಾಯಾಲಯ ಜಾಮೀನು ನೀಡಿದ್ದರೂ, ಅವರ ಬಿಡುಗಡೆಯ ಭರವಸೆ ಇರಲಿಲ್ಲ. ಇದರಿಂದ ನಿರಾಶೆಗೊಂಡಿದ್ದ ಚಿನ್ನಯ್ಯ ಇದೀಗ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.


ನಿನ್ನೆ ಚಿನ್ನಯ್ಯ ಅವರ ಪತ್ನಿ ಮಲ್ಲಿಕಾ ಒಂದು ಲಕ್ಷ ರೂಪಾಯಿಗಳ ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸಿದ್ದಾರೆ. ನಂತರ ನ್ಯಾಯಾಲಯ ಡಿಸೆಂಬರ್ ೧೭ ರಂದು ಚಿನ್ನಯ್ಯ ಅವರ ಬಿಡುಗಡೆ ಆದೇಶವನ್ನು ಹೊರಡಿಸಿದೆ.


ಜಾಮೀನು ಷರತ್ತುಗಳನ್ನು ಪೂರೈಸಿದ ೨೩ ದಿನಗಳ ನಂತರ ಚಿನ್ನಯ್ಯ ಅವರನ್ನು ಬಿಡುಗಡೆ ಮಾಡಲಾಗಿದೆ. ಚಿನ್ನಯ್ಯ ಅವರ ಪತ್ನಿ ಮಲ್ಲಿಕಾ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜಾಮೀನು ನೀಡಿದ್ದಾರೆ. ಆದರೆ, ಅವರು ನಾಲ್ಕು ತಿಂಗಳಿನಿಂದ ಶಿವಮೊಗ್ಗ ಜೈಲಿನಲ್ಲಿದ್ದರು. ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ, ಚಿನ್ನಯ್ಯ ಅವರನ್ನು ಬಿಡುಗಡೆ ಮಾಡಲಾಗಿದೆ. ಸಿ.ಎಸ್. ಚಿನ್ನಯ್ಯ ಅವರು ತಮ್ಮ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಅವರೊಂದಿಗೆ ಮನೆಗೆ ತೆರಳಿದ್ದಾರೆ.