
ಬೆಂಗಳೂರು, ಫೆ.19- ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ. ರಾಜ್ಯ ಸರ್ಕಾರದ ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದ್ದಾರೆ.
38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ನೀಡುವು ದಾಗಿ ಸರ್ಕಾರ ನಿರ್ಧರಿಸಿದೆ. ವೇತನ ಪರಿಷ್ಕರಣೆಗೂ ಸಹ ಸರ್ಕಾರ ಒಪ್ಪಿಕೊಂಡಿದೆ. ಆದರೂ ಸಾರಿಗೆ ನೌಕರರಿಗೆ ತೃಪ್ತಿ ತಂದಿಲ್ಲ. 38 ತಿಂಗಳ ಹಿಂಬಾಕಿ ಹಣ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮವಾಗಿ ಸಭೆ ಮಾಡಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
ನಾಳೆಯಿಂದ ಮುಷ್ಕರ ನಡೆಸದಿರಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮಾರ್ಚ್ 2ರ ಗಡುವು ನೀಡಿದ್ದು, ಅಷ್ಟರೊಳಗೆವಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ತಿಳಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸ್ಥಳಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಭೇಟಿ ನೀಡಿ ನೌಕರರ ಸಮಸ್ಯೆಯನ್ನು ಆಲಿಸಿದ್ದು, ಕೆಲ ಭರವಸೆ ನೀಡಿದರು.
ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು, ಮುಖಂಡರು ಚರ್ಚಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದರು.
ನಮ್ಮ ಎಲ್ಲ ಬೇಡಿಕೆಗಳು ಪೂರ್ಣವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು. ಅದಕ್ಕಾಗಿ ಮಾರ್ಚ್ 2 ರವರೆಗೆ ಗಡುವು ನೀಡಲಾಗಿದೆ. ಸದ್ಯ ಮುಷ್ಕರ ಹಿಂಪಡೆದಿದ್ದರಿಂದ ಸಾರಿಗೆ ನೌಕರರ ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ. ನಾಳೆಯಿಂದ ಎಂದಿನಂತೆ ಬಸ್‌ಗಳು ಸಂಚರಿಸಲಿವೆ.


























