Home ಮುಖಪುಟ ಸುದ್ದಿ ಎಲ್‌ಪಿಜಿ ಇಂಧನ ಅವ್ಯವಸ್ಥೆಗೆ, ಕೇಂದ್ರದ ಆಡಳಿತ ವೈಫಲ್ಯ

ಎಲ್‌ಪಿಜಿ ಇಂಧನ ಅವ್ಯವಸ್ಥೆಗೆ, ಕೇಂದ್ರದ ಆಡಳಿತ ವೈಫಲ್ಯ

ಬೆಂಗಳೂರು ಏ. ೭- ಮೋದಿ ಸರ್ಕಾರದ ಎಲ್‌ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯಿಂದಾಗಿ ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನು ನಾಶಪಡಿಸಿದೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತ್ಮಕ ದುರಂತಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷ ಟೀಕಿಸಿದೆ.


ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕರ್ನಾಟಕದ ಬಿಜೆಪಿ ಜೆಡಿಎಸ್ ಕೇಂದ್ರ ಸಚಿವರು ಅಧಿಕಾರವನ್ನು ಆನಂದದಿಂದ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಈ ಪರಿಸ್ಥಿತಿಗೆ ಅವರು ಉತ್ತರದಾಯಿಯಾಗಿರಬೇಕು ಅಥವಾ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಎಂದು ಒತ್ತಾಯಿಸಿದ್ದಾರೆ.

ಮಾರ್ಚ್ ೨೦೨೬ ರಲ್ಲಿ ಆಟೋ ಗ್ಯಾಸ್/ಎಲ್‌ಪಿಜಿ ಬೆಲೆ ಲೀಟರ್‌ಗೆ ೫೮ ರಿಂದ ೬೧ ಇತ್ತು. ಇಂದು ಅದು ೧೦೫ ರಿಂದ ೧೨೦ ಕ್ಕೆ ಏರಿಕೆಯಾಗಿದ್ದು, ಕೆಲವೇ ವಾರಗಳಲ್ಲಿ ೧೦೬% ಬೆಲೆ ಏರಿಕೆಯಾಗಿದೆ ಖಾಸಗಿ ಅನಿಲ ಪೂರೈಕೆ ಕೇಂದ್ರಗಳಲ್ಲಿ ಲೀಟರ್‌ಗೆ ೧೨೫ ರಿಂದ ೧೩೫ ಹಣ ವಸೂಲಿ ಮಾಡಲಾಗುತ್ತಿದೆ.


ಸಿಎನ್‌ಜಿ ಆಟೋಗಳೂ ಸಹ ಕರ್ನಾಟಕದಾದ್ಯಂತ ತೀವ್ರ ಕೊರತೆ ಎದುರಿಸುತ್ತಿವೆ. ಬೆಲೆ ಏರಿಕೆ ಮತ್ತು ಕೊರತೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಅನಿಲ ಪೂರೈಕೆ ಮಾಡುವ ಸರ್ಕಾರಿ ಕೇಂದ್ರಗಳು ಮುಚ್ಚಲ್ಪಟ್ಟಿವೆ.


ಇದು ಹಣದುಬ್ಬರವಲ್ಲ, ಶ್ರಮಿಕ ವರ್ಗದ ಮೇಲೆ ನಡೆಸುತ್ತಿರುವ ಆರ್ಥಿಕ ದೌರ್ಜನ್ಯ ಎಂದು ಹರಿಯಾಯ್ದಿದ್ದಾರೆ. ಬೆಂಗಳೂರಿನಲ್ಲಿ ೬೦ ರಿಂದ ೭೦ ಎಲ್‌ಪಿಜಿ/ಸಿಎನ್‌ಜಿ ನಿಲ್ದಾಣಗಳಿದ್ದವು, ಈಗ ಕೇವಲ ೧೦ ರಿಂದ ೧೫ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಂದರೆ ಸುಮಾರು ೮೦% ನಿಲ್ದಾಣಗಳು ಬಂದ್ ಆಗಿವೆ!


ನಗರದಲ್ಲಿ ‘ಟೋಟಲ್ ಗ್ಯಾಸ್’ ತನ್ನ ಎಲ್ಲಾ ಕೇಂದ್ರಗಳನ್ನು ಮುಚ್ಚಿದೆ. ದೈನಂದಿನ ಪೂರೈಕೆಯು ೧೨,೦೦೦ ಲೀಟರ್‌ನಿಂದ ೬,೦೦೦ ಲೀಟರ್‌ಗೆ ಕುಸಿದಿದೆ.
ಪ್ರತಿ ವಾಹನಕ್ಕೆ ೪೦೦ ನಷ್ಟು ಮಾತ್ರ ಇಂಧನ ಅನಿಲ ವಿತರಿಸಲಾಗುತ್ತಿದೆ.


ಆಟೋ ಚಾಲಕರು ಬೆಳಿಗ್ಗೆ ೫ ಗಂಟೆಯಿಂದ ೩ ಕಿಲೋಮೀಟರ್ ಉದ್ದದ ಸಾಲಿನಲ್ಲಿ ನಿಂತರೂ ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ. ಆಟೋ ಚಾಲಕರು ಸರದಿ ಸಾಲಿನಲ್ಲಿ ಕಳೆಯುವ ಪ್ರತಿಯೊಂದು ಗಂಟೆಯೂ ಅವರ ಕುಟುಂಬದ ಅನ್ನವನ್ನು ಕಸಿಯುತ್ತಿದೆ. ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ೫ ಲಕ್ಷಕ್ಕೂ ಹೆಚ್ಚು ಆಟೋಗಳಿದ್ದು, ಇವು ಸಾಮಾನ್ಯ ಜನರ ಸಂಚಾರದ ಬೆನ್ನೆಲುಬಾಗಿದೆ.


ಈ ಆಟೋ ಚಾಲಕರು ಕಾರ್ಪೊರೇಟ್ ಸಂಸ್ಥೆಗಳಲ್ಲ, ದಿನಗೂಲಿ ನೌಕರರು. ಪ್ರತಿ ನಿತ್ಯ, ಪ್ರತಿ ಬಾಡಿಗೆಯ ಸಂಪಾದನೆ ಮೇಲೆ ಅವರ ಜೀವನ ಅವಲಂಬಿತವಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ಉಳಿದ ಆಟೋಗಳು ಅರ್ಧ ದಿನವನ್ನು ಸರತಿ ಸಾಲಿನಲ್ಲಿ ಕಾಲ ಕಳೆಯುತ್ತಿವೆ.


ಮೋದಿ ಸರ್ಕಾರದ “ಪೆಟ್ರೋಲ್‌ಗೆ ಬದಲಾಗಿ” ಎಂಬ ಪುಕ್ಕಟೆ ಸಲಹೆಯು ಅಜ್ಞಾನ ಮತ್ತು ಕ್ರೌರ್ಯದಿಂದ ಕೂಡಿದೆ. ಈಗಾಗಲೇ ಅನೇಕ ಆಟೋಗಳು ಪೆಟ್ರೋಲ್‌ನಿಂದ ಗ್ಯಾಸ್‌ಗೆ ಬದಲಾಗಿವೆ, ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಅದು ದುಬಾರಿಯಾಗಿದೆ. ಎಂದು ಹೇಳಿದ್ದಾರೆ ಏಪ್ರಿಲ್ ೧, ೨೦೨೬ ರಂದು ವಾಣಿಜ್ಯ ಸಿಲಿಂಡರ್ ಬೆಲೆ ?೨೦೦ ಏರಿಕೆಯಾಗಿದ್ದು, ಒಂದು ಸಿಲಿಂಡರ್ ಬೆಲೆ ೨,೦೦೦ ದಾಟಿದೆ. ಪ್ರಸ್ತುತ ಒಂದು ಸಿಲಿಂಡರ್ ಬೆಲೆ ೨,೧೬೧ ಆಗಿದ್ದು, ಬೆಲೆ ಇನ್ನೂ ಏರುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಕಾಳಸಂತೆಯಲ್ಲಿ ಒಂದು ಸಿಲಿಂಡರ್ ‘೬,೦೦೦ಕ್ಕೆ ಮಾರಾಟವಾಗುತ್ತಿದೆ!


ಇದರಿಂದ ಲಕ್ಷಾಂತರ ಸಣ್ಣ ಹೋಟೆಲ್‌ಗಳು, ರಸ್ತೆಬದಿಯ ಡಾಬಾ, ತಳ್ಳುಗಾಡಿ ವ್ಯಾಪಾರಿಗಳು ಮತ್ತು ಫುಡ್ ಡೆಲಿವರಿ ಮಾಡುವ ಗಿಗ್ ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ.’ ಭಾರತದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಕೇಂದ್ರ ಸರ್ಕಾರವು ಒಎಂಸಿಗಳ ಮೂಲಕ ನಿಯಂತ್ರಿಸುತ್ತದೆ. ಇದರ ಸಂಪೂರ್ಣ ಜವಾಬ್ದಾರಿ ಮೋದಿ ಸರ್ಕಾರದ್ದೇ ಆಗಿದೆ. ಇಂಧನ ಅನಿಲ ಸಂಗ್ರಹಣೆ ಹಾಗೂ ಪೂರೈಕೆ ಕುರಿತ ಸಂಪೂರ್ಣ ನಿಯಂತ್ರಣ ಮೋದಿ ಸರ್ಕಾರದಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.

ಇಂಧನ ಅನಿಲ ಪೂರೈಕೆ ಎದುರಾಗಿರುವ ಕೊರತೆ ಬಗ್ಗೆ ಹಾಕಲಾಗಿರುವ ಫಲಕಗಳನ್ನು ಒಎಂಸಿಗಳು ನಿರ್ಲಕ್ಷಿಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ಕುಸಿತಕ್ಕೆ ಸಾಕ್ಷಿಯಾಗಿದೆ.


ಎಲ್‌ಪಿಜಿ ಕಾಳಸಂತೆ ರಾಜಾರೋಷವಾಗಿ ನಡೆಯುತ್ತಿದ್ದು, ಖಾಸಗಿ ತೈಲ ಕಂಪನಿಗಳು ಇಂಧನ ತೈಲ ಬೆಲೆ ಏರಿಕೆ ಮಾಡಿವೆ. ಏಪ್ರಿಲ್ ೯ ಮತ್ತು ೨೩ ರ ಚುನಾವಣೆಯ ನಂತರ ಇಂಧನ ತೈಲ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರವು ಕೇವಲ ಘೋಷಣೆಗಳ ಹಿಂದೆ ಅಡಗಿಕೊಳ್ಳುತ್ತಿದೆ.

ಇದು ಕೇವಲ ಇಂಧನದ ಬಿಕ್ಕಟ್ಟಲ್ಲ, ಇದು ಕೋಟ್ಯಂತರ ಜನರ ಬದುಕಿನ ತುರ್ತು ಪರಿಸ್ಥಿತಿ. ಕರ್ನಾಟಕದ ಶ್ರಮಿಕ ವರ್ಗವು ಹತಾಶೆಗೆ ನೂಕಿ ಮೋದಿ ಸರ್ಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಿದೆ. ‘ಇಂಧನಕ್ಕಾಗಿ ನಿಂತಿರುವ ಪ್ರತಿ ಸರತಿ ಸಾಲು ಕೇಂದ್ರ ಸರ್ಕಾರದ ವೈಫಲ್ಯದ ಸಂಕೇತವಾಗಿದೆ.’ ಪ್ರತಿ ದಿನದ ನಷ್ಟವು ಮೋದಿ ಸರ್ಕಾರದ ನಿರ್ಲಕ್ಷದ ದುಷ್ಪರಿಣಾಮ.


ಕರ್ನಾಟಕದ ಜನರು ಈ ದ್ರೋಹವನ್ನು ಕ್ಷಮಿಸುವುದಿಲ್ಲ. ಮೋದಿ ಸರ್ಕಾರದ ಈ ಮೌನವು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಹಾಗೂ ಇತರ ರಾಜ್ಯಗಳ ಚುನಾವಣೆಗಳಲ್ಲಿ ಅವರ ಸೋಲಿನಲ್ಲಿ ಪ್ರತಿಧ್ವನಿಸಲಿದೆ. ಎಂದು ಹೇಳಿದ್ದಾರೆ.