
ಯಾದಗಿರಿ,ಮಾ.10-ಕನ್ನಡಕ್ಕೆ ಸಾವೇ ಇಲ್ಲ. ಎಂದೆಂದಿಗೂ ನಾವೆಲ್ಲ ಕನ್ನಡಿಗರಾಗಿರೋಣ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಕರೆ ನೀಡಿದರು.
ಅವರು ಆಂಧ್ರದ ಗಡಿಭಾಗವಾದ ಯಾದಗಿರಿ ಜಿಲ್ಲೆಯ ಗುರುಮಠಕಲ್‍ದಲ್ಲಿ “ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ” ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಇಂದು ಜಗತ್ತಿನಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಭಾಷೆಗಳಿವೆ. ಅದರಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಭಾಷೆಗಳು ಸಾವಿನ ಅಂಚಿನಲ್ಲಿ ಇವೆ. 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ. ಇಂದಿನ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ತಮ್ಮದೇ ಆದ ಲಿಪಿ ಇಲ್ಲ. ನಮಗಿಂತ ಮುಂಚೆ ಶಾಸ್ತ್ರೀಯ ಭಾಷೆಯ ಸೌಲತ್ತು ಪಡೆದ ತಮಿಳಿನ ಬಗ್ಗೆ ಅಪಸ್ವರ ಇವೆ. ಆದರೆ ಕನ್ನಡ ಸ್ವಂತ ಲಿಪಿ ಹೊಂದಿದೆ. ಹಾಗೂ ಕನ್ನಡ ಭಾಷೆಯು ಬರವಣಿಗೆಗೆ ಮತ್ತು ಆಡುವಾಗಲೂ ಸಹ ತನ್ನದೇ ಆದ ಮಾಧುರ್ಯ ಹೊಂದಿದೆ. ಆ ಕಾರಣ ಉದ್ಯೋಗಕ್ಕಾಗಿ ಇಂಗ್ಲಿಷ್ ಹಾಗೂ ಇತರ ಭಾಷೆ ಕಲಿಯಿರಿ.ಆದರೆ ಮನೆ ಮಾತು ಮತ್ತು ನಿಮ್ಮ ಶಿಕ್ಷಣದ ಮಾಧ್ಯಮ ಕನ್ನಡವಾಗಿರಲಿ. ಪ್ರಾಥಮಿಕ ಪ್ರೌಢಶಾಲೆ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ನಮ್ಮ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು ಈ ಸಲ ಐಎಎಸ್ ಪಾಸ್ ಮಾಡಿದ್ದಾರೆ.ಇದು ನಿಮಗೆ ಸ್ಪೂರ್ತಿ ಆಗಲಿ ಎಂದು ವಿದ್ಯಾರ್ಥಿಗಳು ಕನ್ನಡದಲ್ಲಿ ಓದಲು ವಿನಂತಿಸಿದರು.
ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಪ್ರಗತಿಪರ ಸ್ವಾಮೀಜಿಗಳಾದ ಪೂಜ್ಯ ಗುರುಮುರುಘರಾಜೇಂದ್ರ ಶ್ರೀ ಗಳು ಖಾಸಾ ಮಠ ವಹಿಸಿದ್ದರು.ಇಂತಹ ಕನ್ನಡದ ಅಸ್ಮಿತೆ ನೆನಪಿಸುವ ಈ ಕಾರ್ಯಕ್ರಮ ಗುರುಮಠಕಲ್ ಗಡಿ ಭಾಗಕ್ಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಶ್ರೀ ಹೊನ್ಕಲ್ ಪ್ರತಿಷ್ಠಾನಕ್ಕೆ ಶುಭ ಕೋರಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ವಿ ಪುರುಷೋತ್ತಮ ಅವರು ವಹಿಸಿದ್ದರು .ಅವರು ಗಡಿ ನಾಡಿನಲ್ಲಿ ಇಂತಹ ಕನ್ನಡದ ಕಂಪು ಹರಡುವ ಕಾರ್ಯಕ್ರಮ ತಮ್ಮ ಕಾಲೇಜಿನಲ್ಲಿ ನಡೆಸುವ ಮೂಲಕ ಇನ್ನಷ್ಟು ತಮ್ಮ ವಿದ್ಯಾರ್ಥಿಗಳಿಗೆ ಕನ್ನಡದ ಅಸ್ಮಿತೆ ಬಗ್ಗೆ ಜಾಗೃತಿ ಮೂಡಿಸಿದ್ದು ಸಾರ್ಥಕವಾಯಿತು ಎಂದು ಅಭಿನಂದನೆಗಳು ಹೇಳಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಾಬುರಾಯ ದೊರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಕನ್ನಡದ ಚಟುವಟಿಕೆಗಳು ಇನ್ನಷ್ಟು ಮತ್ತಷ್ಟು ಈ ಭಾಗದಲ್ಲಿ ನಡೆಸಬೇಕಿದೆ. ಗಡಿನಾಡಿನ ಭಾಗದ ಅನೇಕ ಶಾಲೆಗಳ ಪರಸ್ಥಿತಿ ಶೋಚನೀಯ ಆಗಿದೆ.ಯಾವುದೇ ಕನ್ನಡದ ಶಾಲೆ ಮುಚ್ಚುವಂತಹ ಪರಸ್ಥಿತಿ ಬರಬಾರದು.ಕನ್ನಡಕ್ಕಾಗಿ ಕೈ ಎತ್ತಲು ತಾವು ಸದಾ ಮುಂದೆ ಬರುವುದಾಗಿ ಹೇಳಿ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ನಂತರ ಕನ್ನಡದ ಅಸ್ಮಿತೆಯ ಹಿನ್ನೆಲೆಯಲ್ಲಿ ಎರಡು ಗೋಷ್ಠಿಗಳು ನಡೆದವು. ಶಾಸನಗಳಲ್ಲಿ ಕನ್ನಡ ವಿಷಯ ಕುರಿತು ಹಿರಿಯ ಸಂಶೋಧಕ ಹಾಗೂ ಖಜಾನೆಯ ಕೆ.ಎ.ಎಸ್.ಅಧಿಕಾರಿ ಡಾ.ಎಂ.ಎಸ್.ಶಿರವಾಳ ಅವರು ಹಲವಾರು ಶಾಸನಗಳನ್ನು ಉಲ್ಲೇಖಿಸಿ ಅರ್ಥಪೂರ್ಣವಾಗಿ ಮಾತನಾಡಿ ಕನ್ನಡದ ಪ್ರಾಚಿನತೆಯನ್ನು ತಿಳಿಸಿದರು.
ಕನ್ನಡದಲ್ಲಿ ಮಹಾ ಕಾವ್ಯಗಳು ಕುರಿತು ಶ್ರೀಮತಿ ಜ್ಯೋತಿಲತಾ ತಡಿಬಿಡಿಮಠ ರಾಮಾಯಣ ಮಹಾಭಾರತ ಒಳಗೊಂಡಂತೆ ಅನೇಕ ಮಹಾಕಾವ್ಯಗಳ ಕುರಿತು ಉಪನ್ಯಾಸ ನೀಡಿದರು.ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕೃಷ್ಣಾ ಕೆ ವಹಿಸಿದ್ದರು.ಈ ಗೋಷ್ಠಿಯನ್ನು ಕವಿ ಹಾಗೂ ಉಪನ್ಯಾಸಕ ಡಾ.ಮರೆಪ್ಪ ನಾಟೇಕಾರ ಅವರು ನಿರ್ವಹಿಸಿ ವಂದಿಸಿದರು.
ಊಟದ ವಿರಾಮದ ನಂತರ ಎರಡನೇ ಗೋಷ್ಠಿ ನಡೆಯಿತು.ಅದರಲ್ಲಿ ವಚನ ಚಳುವಳಿ ಮತ್ತು ತತ್ವಪದ ಸಾಹಿತ್ಯ ಕುರಿತು ಹೆಸರಾಂತ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ ಈ ವಚನ ಸಾಹಿತ್ಯದ ಕಾರಣಕ್ಕಾಗಿ ಕನ್ನಡಕ್ಕೆ ಎಂದೆಂದಿಗೂ ಸಾವಿಲ್ಲ. ಈಗಾಗಲೇ ವಚನ ಸಾಹಿತ್ಯ ಹಾಗೂ ಅನುಭಾವ ಸಾಹಿತ್ಯ ಚಳುವಳಿಗೆ 13 ನೇ ಶತಮಾನ ನಡೆದಿದೆ.ಇನ್ನೂ ನೂರು ಶತಮಾನ ಕಳೆದರೂ ಕನ್ನಡದ ಅಸ್ಮಿತೆಗೆ ಧಕ್ಕೆ ಇಲ್ಲವೆಂದು ಉಪನ್ಯಾಸ ನೀಡಿದರು.
ಜನಪದ ಮತ್ತು ದಾಸ ಸಾಹಿತ್ಯ* ಕುರಿತು ಗೋಷ್ಠಿ ಎರಡರಲ್ಲಿ ಮಾತನಾಡಿದ ಉಪನ್ಯಾಸಕ ವೆಂಕಟೇಶ ಅವರು ಈ ಎರಡು ಸಾಹಿತ್ಯ ಪ್ರಕಾರಗಳು ನೂರಾರು ತಲೆಮಾರಿನಿಂದ ಬಂದಿವೆ ಹಾಗೂ ಮುಂದುವರಿಯಲಿವೆ ಎಂದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಬಾಬುರಾಯ ದೊರೆ ಅವರು ವಹಿಸಿದ್ದರು.ಈ ಗೋಷ್ಠಿಯನ್ನು ಉಪನ್ಯಾಸಕರಾದ ಡಾ.ಮಲ್ಲಪ್ಪನವರು ನಿರ್ವಹಿಸಿ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ.ಜೆ.ವಿ.ಪುರುಷೋತ್ತಮ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ, ಇಂಗ್ಲೀಷ್ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಿಟ್ಕಲ್ ಪೆÇ್ರ. ಇಮ್ರಾಜ ಖಾಜಿ, ಸಹಾಯಕ ಪ್ರಾಧ್ಯಾಪಕರು,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರು ಸಮಾರೋಪ ನುಡಿ ಆಡಿ ನಾಡು ನುಡಿ ನೆಲ ಜಲದ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕೆಂದು ಕರೆ ನೀಡಿದರು.
ಉಪನ್ಯಾಸಕಿ ಡಾ.ಸಂಗಿತಾ ನಾಗೂರು ಅವರು ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸುವ ಮೂಲಕ ವಿಚಾರ ಸಂಕಿರಣ ಮುಕ್ತಾಯ ಗೊಂಡಿತು.ನೂರಾರು ಸಾಹಿತ್ಯ ಆಸಕ್ತರು,ಗಣ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಎಲ್ಲೆಡೆ ಕನ್ನಡದ ಕಂಪು ಹರಡುವಂತೆ ಕನ್ನಡದ ಶಾಲುಗಳು ವಿಜೃಂಭಿಸಿದವು.


























