
ಕಲಬುರಗಿ: ಮಾನವನು ಜೀವಿಸಿ, ಬೆಳವಣಿಗೆ ಹೊಂದಬೇಕಾದರೆ ಆಹಾರ ಸೇವನೆ ಅಗತ್ಯ. ಆಹಾರವನ್ನು ಚೆನ್ನಾಗಿ ತಿನ್ನಲು ಹಲ್ಲುಗಳು ಅವಶ್ಯಕವಾಗಿವೆ. ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಅವುಗಳ ಸಂರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ, ಖ್ಯಾತ ದಂತವೈದ್ಯ ಡಾ.ನವಿನ್ ಕಾರಬಾರಿ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ರಾಷ್ಟ್ರೀಯ ದಂತವೈದ್ಯರ ದಿನಾಚರಣೆ’ಯನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿವಸಗಳಲ್ಲಿ ಮಕ್ಕಳಿಂದ ವಯೋವೃದ್ಧರಲ್ಲಿ ವಿವಿಧ ರೀತಿಯ ದಂತ ಸಮಸ್ಯೆಗಳು ಕಂಡುಬರುತ್ತಿವೆ. ಮಕ್ಕಳು ಚಾಕಲೇಟ್, ಜಂಕ್ ಫುಡ್, ಸಿಹಿ ಪದಾರ್ಥಗಳ ಸೇವನೆಯಿಂದ ಹಲ್ಲಿನ ಸಂದಿಗಳಲ್ಲಿ ಹುಳ ಹತ್ತುತ್ತವೆ. ಅತಿ ಬಿಸಿ ಮತ್ತು ತಂಪಾದ ವಸ್ತುಗಳ ಸೇವನೆಯಿಂದ ಹಲ್ಲುಗಳಲ್ಲಿ ಸಮಸ್ಯೆಯಾಗುತ್ತದೆ. ದಿನಕ್ಕೆ ಬೆಳೆಗೆ ಮತ್ತು ರಾತ್ರಿ ಮಲಗುವುದಕ್ಕಿಂತ ಮುಂಚೆ ಎರಡು ಬಾರಿ ಬ್ರಸ್ ಮಾಡುವುದು ಉತ್ತಮ. ಆಹಾರ ಸೇವನೆಯ ನಂತರ ನೀರಿನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಕಡ್ಡಿ ಅಥವಾ ಚೂಪಾದ ವಸ್ತುಗಳನ್ನು ಹಲ್ಲಿನಲ್ಲಿ ಹಾಕಿಕೊಳ್ಳುವುದರಿಂದ ನಂಜಾಗಿ ಹಲ್ಲು ನೋವು ಉಂಟಾಗುತ್ತದೆ. ವಿಟಾಮಿನ್-ಸಿ ಇರುವ ಲಿಂಬು ಹಾಗೂ ಇನ್ನಿತರ ಹಣ್ಣುಗಳನ್ನು ಸೇವಿಸಬೇಕು. ಹಲ್ಲಿನ ಸಮಸ್ಯೆಗಳು ಕಂಡುಬಂದರೆ ತಜ್ಞ ವೈದ್ಯರನ್ನು ಬೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್ ಸೇರಿದಂತೆ ಇನ್ನಿತರರಿದ್ದರು.


























