
ನವದೆಹಲಿ, ಏ.೭:ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಕಠಿಣ ಎಚ್ಚರಿಕೆ ನಂತರ ಅಮೆರಿಕಾಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. “ಸ್ಟ್ರೇಟ್ ಆಫ್ ಹೋರ್ಮುಜ್ ತೆರೆಯದಿದ್ದರೆ ಇಂದೇ ಒಂದು ಸಂಪೂರ್ಣ ನಾಗರಿಕತೆ ನಾಶವಾಗುತ್ತದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿರುವ ಹಿನ್ನೆಲೆ, ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಸ್ಟ್ರೇಟ್ ಆಫ್ ಹೋರ್ಮುಜ್ ಅನ್ನು ತೆರೆಯಲು ಟ್ರಂಪ್ ೪೮ ಗಂಟೆಗಳ ಗಡುವು ನೀಡಿದ್ದು, ಅದರ ಅವಧಿ ಮುಗಿಯಲು ಕೇವಲ ಕೆಲವೇ ಗಂಟೆಗಳು ಬಾಕಿ ಇರುವಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಅವಧಿಯನ್ನು “ಆಧುನಿಕ ಇತಿಹಾಸದ ಅತ್ಯಂತ ಪ್ರಮುಖ ಕ್ಷಣ” ಎಂದು ಟ್ರಂಪ್ ವರ್ಣಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಇರಾನ್, “ನಿಮ್ಮ ಮತ್ತು ನಿಮ್ಮ ಮೈತ್ರಿಕಾರರು ಮರೆಯಲಾಗದ ಹೊಡೆತ ಅನುಭವಿಸುವರು” ಎಂದು ದಕ್ಷಿಣ ಆಫ್ರಿಕಾದಲ್ಲಿನ ಇರಾನ್ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಹೇಳಿದೆ. ಜೊತೆಗೆ “ನಾಳೆ ಇನ್ಶಾ ಅಲ್ಲಾ” ಎಂಬ ಗೂಢ ಸಂದೇಶವನ್ನು ಹಂಚಿಕೊಂಡಿದೆ.ಇನ್ನೊಂದೆಡೆ, ಇರಾನ್ ಜಿಂಬಾಬ್ವೆಯ ರಾಯಭಾರ ಕಚೇರಿ ಟ್ರಂಪ್ ಹೇಳಿಕೆಯನ್ನು ವ್ಯಂಗ್ಯವಾಡಿ, “ಇವು ನಿಮ್ಮ ಬಾಯಿಗೆ ದೊಡ್ಡ ಮಾತುಗಳು” ಎಂದು ಟೀಕಿಸಿದೆ.
ಉದ್ವಿಗ್ನತೆ ನಡುವೆ, ಸ್ಟ್ರೇಟ್ ಆಫ್ ಹೋರ್ಮುಜ್ ಸಮೀಪದಲ್ಲಿರುವ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರದ ಮೇಲೆ ಅಮೆರಿಕಾ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದ್ವೀಪದ ಮೂಲಕ ಇರಾನ್‌ನ ಸುಮಾರು ೯೦% ತೈಲ ರಫ್ತು ನಡೆಯುತ್ತದೆ.
ಇರಾನ್‌ನ ಐಆರ್‌ಜಿಸಿ ಪ್ರತಿಕ್ರಿಯಿಸಿ, “ಇನ್ನು ಸಹನೆಯ ಅವಧಿ ಮುಗಿದಿದೆ. ಅಮೆರಿಕಾ ಮತ್ತು ಅದರ ಮೈತ್ರಿಕಾರರನ್ನು ವರ್ಷಗಳ ಕಾಲ ತೈಲ?ಅನಿಲದಿಂದ ವಂಚಿಸುವ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಸಿದೆ.
ರಾಜತಾಂತ್ರಿಕ ಸಂಪರ್ಕ ಸಂಪೂರ್ಣ ಸ್ಥಗಿತ
ಇದೊಂದಿಗೇ, ಇರಾನ್ ಅಮೆರಿಕ ಇರುವ ಎಲ್ಲಾ ರಾಜತಾಂತ್ರಿಕ ಹಾಗೂ ಪರೋಕ್ಷ ಸಂಪರ್ಕಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಯಾವುದೇ ಸಂದೇಶ ವಿನಿಮಯವೂ ಈಗ ಸ್ಥಗಿತಗೊಂಡಿದೆ.
ಶಾಂತಿ ಪ್ರಯತ್ನ ವಿಫಲ ಹಿನ್ನೆಲೆ ಅಮೆರಿಕಾ ಮತ್ತು ಪ್ರಾದೇಶಿಕ ಮಧ್ಯವರ್ತಿಗಳಿಂದ ೪೫ ದಿನಗಳ ಯುದ್ಧ ವಿರಾಮ ಒಪ್ಪಂದಕ್ಕೆ ಪ್ರಯತ್ನ ನಡೆದಿದ್ದರೂ, ಅದರಲ್ಲಿ ಪ್ರಗತಿ ಕಂಡುಬಂದಿಲ್ಲ. ಇರಾನ್ ತಾತ್ಕಾಲಿಕ ವಿರಾಮಕ್ಕಿಂತ ಶಾಶ್ವತ ಪರಿಹಾರವನ್ನು ಒತ್ತಾಯಿಸಿದೆ.ಒಟ್ಟಿನಲ್ಲಿ, ಎರಡೂ ದೇಶಗಳ ನಡುವಿನ ತೀವ್ರತೆ ಮುಂದಿನ ಕೆಲವು ಗಂಟೆಗಳಲ್ಲಿ ಮತ್ತಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ.
























