
ಯಾದಗಿರಿ,ಮಾ. 24: ಪತ್ನಿಯೊಂದಿಗೆ ಅಕ್ರಮ ಸಂಬಂಧದ ವಿಚಾರವಾಗಿ ಉಂಟಾದ ವೈಷಮ್ಯ ಕೊನೆಗೆ ಪತಿಯ ಹತ್ಯೆಗೆ ಕಾರಣವಾದ ಘಟನೆ ಯಾದಗಿರಿ ತಾಲೂಕಿನ ಎಂ. ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ ಸಾಗರ್ ರಾಠೋಡ್ (30) ಮೃತ ವ್ಯಕ್ತಿ. ಇದೇ ಗ್ರಾಮದ ರೆಡ್ಡಿ ರಾಠೋಡ್ ಮೇಲೆ ಹತ್ಯೆ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಪೆÇಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳೆದ ಸುಮಾರು ಒಂದು ವರ್ಷದಿಂದ ಮೃತನ ಪತ್ನಿಯೊಂದಿಗೆ ಆರೋಪಿಗೆ ಅಕ್ರಮ ಸಂಬಂಧವಿದ್ದುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ಸಾಗರ್ ಮತ್ತು ರೆಡ್ಡಿ ನಡುವೆ ಹಲವಾರು ಬಾರಿ ಗಲಾಟೆಗಳು ನಡೆದಿದ್ದು, ಇಬ್ಬರ ಮಧ್ಯೆ ದ್ವೇಷ ಹೆಚ್ಚುತ್ತಲೇ ಇತ್ತು ಎನ್ನಲಾಗಿದೆ.
ಘಟನೆ ನಡೆದ ದಿನವೂ ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಬಳಿಕ ವಾಗ್ವಾದ ತೀವ್ರಗೊಂಡು ಹಿಂಸಾತ್ಮಕ ರೂಪ ಪಡೆದು ಕೊಲೆಯಾಗಿ ಅಂತ್ಯಗೊಂಡಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಘಟನೆಗೆ ಅಪಘಾತದ ರೂಪ ನೀಡಲು ಆರೋಪಿಯು ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಸ್ಥಳಾಂತರಿಸುವುದು ಹಾಗೂ ವಾಹನಕ್ಕೆ ಹಾನಿ ಉಂಟುಮಾಡಿರುವುದು ಇದಕ್ಕೆ ಸೂಚಕವೆಂದು ತನಿಖಾ ಮೂಲಗಳು ಹೇಳಿವೆ. ಆದರೆ ಸ್ಥಳದಲ್ಲಿದ್ದ ಸುಳಿವುಗಳು ಮತ್ತು ಪರಿಸ್ಥಿತಿಗಳ ವೈಪರಿತ್ಯ ಗಮನಿಸಿದ ಪೆÇಲೀಸರು ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಾಗ ನಿಜಾಂಶ ಬಹಿರಂಗವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಪೂರ್ವಯೋಜಿತವಾಗಿ ಹತ್ಯೆ ನಡೆಸಿರುವ ಸಾಧ್ಯತೆಗಳನ್ನೂ ಪೆÇಲೀಸರು ಪರಿಶೀಲಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದ್ದು, ಕುಟುಂಬದ ಒಳ ಕಲಹ ಇಂತಹ ದುರಂತಕ್ಕೆ ದಾರಿ ಮಾಡಿಕೊಟ್ಟಿರುವುದು ವಿಷಾದನೀಯವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.
ಈ ಕುರಿತು ಯಾದಗಿರಿ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



























