Home ಜಿಲ್ಲೆ ವಡಗೇರಾ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಬಿರುಸು : ಜನಜೀವನಕ್ಕೆ ಸಂಕಟ

ವಡಗೇರಾ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಬಿರುಸು : ಜನಜೀವನಕ್ಕೆ ಸಂಕಟ

ಯಾದಗಿರಿ:ಜಿಲ್ಲೆಯ ವಾಡಗೇರಾ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ದಿನೇದಿನೇ ಬಿರುಸುಗೊಳ್ಳುತ್ತಿದ್ದು, ಸ್ಥಳೀಯ ಜನರ ಜೀವನಕ್ಕೆ ತೀವ್ರ ಸಂಕಟ ಉಂಟುಮಾಡುತ್ತಿದೆ. ವಿಶೇಷವಾಗಿ ಭೀಮಾ ಹಾಗೂ ಕೃಷ್ಣಾ ನದಿ ತೀರ ಪ್ರದೇಶಗಳಲ್ಲಿ ರಾತ್ರಿ ಮಾತ್ರವಲ್ಲದೆ ಕೆಲವೆಡೆ ಹಗಲು ವೇಳೆಯಲ್ಲಿಯೂ ಮರಳು ತೆಗೆಯುವ ಕಾರ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವಾಡಗೇರಾ ತಾಲೂಕಿನ ಗೋಡಿಹಾಳ, ಕುಮನೂರ, ಜೋಳದಡಗಿ, ಬೆಂಡೆಬೆAಬಳಿ, ಹೈಯ್ಯಾಳ ಹಾಗೂ ಐಕೂರು ಸೇರಿದಂತೆ ಹಲವು ಗ್ರಾಮಗಳ ನದಿ ತೀರ ಪ್ರದೇಶಗಳಲ್ಲಿ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೇ ಕಾರ್ಯಾಚರಣೆ ನಡೆಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾಕ್ಟರ್‌ಗಳ ಮೂಲಕ ನದಿಯಿಂದ ಮರಳು ತೆಗೆದು ಸಮೀಪದ ಹೊಲಗಳಲ್ಲಿ ಸಂಗ್ರಹಿಸಿ, ನಂತರ ರಾತ್ರಿ ವೇಳೆಯಲ್ಲಿ ಟಿಪ್ಪರ್‌ಗಳ ಮೂಲಕ ವಿವಿಧ ಕಡೆಗಳಿಗೆ ಸಾಗಣೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ, ಜೆಸಿಬಿ ಯಂತ್ರಗಳ ಮೂಲಕ ನದಿಯಿಂದ ಮರಳು ತೆಗೆದು ಟ್ರಾಕ್ಟರ್‌ಗಳಲ್ಲಿ ತುಂಬಿಸಿ, ನಂತರ ಟಿಪ್ಪರ್ ಲಾರಿಗಳಿಗೆ ಡಂಪಿAಗ್ ಮಾಡಿ ಸಾಗಣೆ ಮಾಡಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಪಾವತಿಸದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ವ್ಯಾಪಾರ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಕ್ರಮ ಮರಳು ಸಾಗಣೆಯಲ್ಲಿ ದಿನಕ್ಕೆ ನೂರಾರು ಟ್ರ‍್ಯಾಕ್ಟರ್ ಹಾಗೂ ಟಿಪ್ಪರ್‌ಗಳು ಗ್ರಾಮೀಣ ರಸ್ತೆಗಳ ಮೂಲಕ ಸಂಚರಿಸುತ್ತಿರುವುದರಿAದ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ ರಸ್ತೆಗಳು ದೊಡ್ಡ ಗುಂಡಿಗಳಾಗಿ ಕುಸಿದು ಹೋಗಿದ್ದು, ಗ್ರಾಮಸ್ಥರು, ರೈತರು ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಡಲು ಕಷ್ಟ ಅನುಭವಿಸುತ್ತಿದ್ದಾರೆ.

ಗ್ರಾಮಗಳ ಒಳ ರಸ್ತೆಗಳಲ್ಲಿಯೂ ಟ್ರ‍್ಯಾಕ್ಟರ್‌ಗಳ ಅತಿಯಾದ ಸಂಚಾರದಿAದ ಧೂಳು ಹೆಚ್ಚಾಗಿ ಜನರಿಗೆ ಉಸಿರಾಟದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ರಸ್ತೆ ದಾಟುವುದೇ ಅಪಾಯಕರವಾಗಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ.

ಭೀಮಾ ನದಿ ತೀರ ಪ್ರದೇಶಗಳಲ್ಲಿ ಆಳವಾಗಿ ತೆಗ್ಗು ತೋಡಿ ಮರಳು ತೆಗೆಯುತ್ತಿರುವುದರಿಂದ ಪರಿಸರ ಸಮತೋಲನಕ್ಕೂ ದೊಡ್ಡ ಹಾನಿ ಉಂಟಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಎದುರಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾ ವತಿಯಿಂದ ವಾಡಗೇರಾ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಸಮಿತಿಯ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಮೆಟ್ಟಿಗೌಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ನೀಡಿ, ಭೀಮಾ ನದಿ ತೀರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಿ, ಅಕ್ರಮ ಮರಳು ಸಾಗಣೆ ನಡೆಸುವ ಟ್ರ‍್ಯಾಕ್ಟರ್ ಹಾಗೂ ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಶೆಟ್ಟಿ (ಕಾರ್ಯಾಧ್ಯಕ್ಷರು),
ಮೌನೇಶ್ (ಕಾರ್ಯದರ್ಶಿ),ಆನಂದ್ (ಉಪಾಧ್ಯಕ್ಷರು),ರಘುನಾಯಕ (ತಾಲೂಕು ಅಧ್ಯಕ್ಷರು, ವಾಡಗೇರಾ) ಸೇರಿದಂತೆ ಹಲವರು ಉಪಸ್ಥಿತರಿದ್ದರು.