
ಯಾದಗಿರಿ:ಮಾ.೧೦: ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಕೋಣೆಯ ಚಾವಣಿ ಏಕಾಏಕಿ ಕುಸಿದು ಅಡುಗೆ ಸಹಾಯಕಿ ಗಾಯಗೊಂಡ ಘಟನೆ ನಡೆದಿದೆ.
ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸುತ್ತಿದ್ದ ವೇಳೆ ಬಿಸಿ ಊಟದ ಕೋಣೆಯ ಚಾವಣಿಯ ಒಂದು ಭಾಗ ಕುಸಿದ ಪರಿಣಾಮ ಅಡುಗೆ ಸಹಾಯಕಿ ನೀಲಮ್ಮ ಅವರ ತಲೆಗೆ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.
ಮಾಹಿತಿಯ ಪ್ರಕಾರ, ಈ ಬಿಸಿ ಊಟದ ಅಡುಗೆ ಕೋಣೆ ಕಟ್ಟಡ ನಿರ್ಮಾಣಗೊಂಡು ಸುಮಾರು ೩೦ ವರ್ಷಗಳು ಕಳೆದಿದ್ದು, ಕಟ್ಟಡದ ಗೋಡೆಗಳಲ್ಲಿ ಬಿರುಕು ಬಿದ್ದು ದುಸ್ಥಿತಿಗೆ ತಲುಪಿದೆ. ಚಾವಣಿ ಭಾಗವೂ ದುರ್ಬಲಗೊಂಡಿದ್ದು ಯಾವಾಗ ಬೇಕಾದರೂ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿದಿನ ಅಡುಗೆ ಮಾಡುವ ಅಡುಗೆ ಸಹಾಯಕಿಯರು ಕೂಡ ಈ ಪರಿಸ್ಥಿತಿಯಿಂದ ಭಯಭೀತರಾಗಿದ್ದಾರೆ. ಮಕ್ಕಳು ಹಾಗೂ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ಕಟ್ಟಡವನ್ನು ಪರಿಶೀಲಿಸಿ ಹೊಸ ಬಿಸಿ ಊಟದ ಅಡುಗೆ ಕೋಣೆಯನ್ನು ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಹಣಮಂತ ದೊಡ್ಮನಿ ಅವರು ಸಂಬAಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.





























