Home ಜಿಲ್ಲೆ ಕಲಬುರಗಿ ನೆನೆಗುದಿಗೆ ಬಿದ್ದಿರುವ ಹೊನ್ನಾಳ- ತಿನ್ನೂರ್ ಬ್ರಿಡ್ಜ್ ಕಾಮಗಾರಿ : ಸದನದಲ್ಲಿ ಶಾಸಕ ಅಜಯ್ ಸಿಂಗ್ ಪ್ರಸ್ತಾಪ

ನೆನೆಗುದಿಗೆ ಬಿದ್ದಿರುವ ಹೊನ್ನಾಳ- ತಿನ್ನೂರ್ ಬ್ರಿಡ್ಜ್ ಕಾಮಗಾರಿ : ಸದನದಲ್ಲಿ ಶಾಸಕ ಅಜಯ್ ಸಿಂಗ್ ಪ್ರಸ್ತಾಪ

ಕಲಬುರಗಿ:ಮಾ.10:ಭೀಮಾ ನದಿ ದಡದಲ್ಲಿ ಬರುವ ಜೇವರ್ಗಿ ಅಸೆಂಬ್ಲಿ ಕ್ಷೇತ್ರದಲ್ಲಿರುವ ಹೊನ್ನಾಳ್ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿರುವ ತಿನ್ನೂರ್ ಗ್ರಾಮಗಳ ನಡುವೆ ಸಂಪರ್ಕ ಬೆಸೆಯುವ ಸೇತುವೆ ಕಾಮಗಾರಿ ನಾನಾ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿದ್ದು ಆದಷ್ಟು ಬೇಗ ಸದರಿ ಕಾಮಗಾರಿ ಪೂರ್ಣಗೊಲಿಸಿ ಸುತ್ತಲಿನ ಹತ್ತಾರ ಹಳ್ಳಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಜೇವರ್ಗಿ ಶಾಸಕರು, ಕೆಕೆಆರ್‍ಡಿಬಿ ಅಧ್ಯಕ್ಷರು ಆಗಿರುವ ಡಾ. ಅಜಯ್ ಸಿಂಗ್ ಅವರು ಸೋಮವಾರ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.

ಕಳೆದ ಅವಧಿಯಲ್ಲಿ ಸಂಭವಿಸಿದ ಭೀಕರ ಭೀಮಾ ಪ್ರವಾಹದ ಅಬ್ಬರಕ್ಕೆ ಸೇತುವೆ ಕಾಮಗಾರಿಯಲ್ಲಿ ಅಳವಡಿಸಲಾಗಿದ್ದ 15 ಗಡ್ಡರ್‍ಗಳು, ಬೆಲೆಬಾಳುವ ಸಲಕರಣೆಗಳು ಮತ್ತು ಯಂತ್ರೋಪಕರಣಗಳು ಕೊಚ್ಚಿಹೋಗಿದ್ದವು. ಈ ಬೆಳಣಿಗೆಯಿಂದಾಗಿ ಹಾಗೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಅರ್ಧಕ್ಕೆ ನಿಂತು ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಯುಂಟಾಗಿದೆ.

ಅತೀವೃಷ್ಟಿ, ಪ್ರವಾಹದ ಹೊಡೆತಕ್ಕೆ ಸದರಿ ಸೇತುವೆ ಯೋಜನೆ ಏರುಪೇರಾಗಿದೆ, ಯೋಜನೆ ವೆಚ್ಚ ಮತ್ತು ಕಾಲಮಿತಿಯಲ್ಲಿ ಆಗಿರುವ ವಿಳಂಬವನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಈ ನೆನೆಗುದಿಗೆ ಬಿದ್ದಿರುವ ಕಾಮಗಾರಿಗೆ ಮರುಜೀವ ನೀಡಬೇಕು, ಈ ವಿಷಯವಾಗಿ ಶೀಘ್ರ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚೆ ಏರ್ಪಾಟು ಮಾಡಿ ಪರಿಹಾರ ಹುಡುಕಬೇಕು ಎಂದು ಡಾ. ಅಜಯ್ ಸಿಂಗ್ ಸದನದ ಗಮನ ಸೆಳೆದರು.


ಈ ವಷಾರ್ಂತ್ಯದೊಳಗೆ ಕಾಮಗಾರಿ ಪೂರ್ಣ- ಜಾರಕಿಹಳಿ

ಸದನದಲ್ಲಿ ಹೊನ್ನಾಳ- ತಿನ್ನೂರ್ ಅರೆಬರೆ ಸೇತುವೆ ಕಾಮಗಾರಿ ಬಗ್ಗೆ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಪ್ರಸ್ತಾಪಿಸಿದ ವಿಷಯಗಳನ್ನು ಆಲಿಸಿದ ಲೋಕೋಪಯೋಗಿ ಖಾತೆ ಸಚಿವರಾದ ಸತೀಶ ಜಾರಕಿಹೊಳಿ, ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಸ್ಥಗಿತಗೊಂಡ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹೊನ್ನಾಳ್ ಹಾಗೂ ಚಿತ್ತಾಪುರದಲ್ಲಿನ ತಿನ್ನೂರ್ ಗ್ರಾಮಗಳ ಬಳಿ ಭೀಮೆಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯನ್ನು ಈ ವರ್ಷದ ಅಂತ್ಯದೊಳಗೆ ಅಂದರೆ, ಡಿಸೆಂಬರ್ 2026ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದ್ದಾರೆ.

ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈಗ ಎಲ್ಲಾ ತಾಂತ್ರಿಕ ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿಯನ್ನು ಪುನರಾರಂಭಿಸಲು ಮುಂದಾಗಲಿದೆ. ಪ್ರವಾಹದಂತಹ ನೈಸರ್ಗಿಕ ವಿಕೋಪದಿಂದ ಕಾಮಗಾರಿ ವಿಳಂಬವಾಗಿದ್ದು ನಿಜ, ಆದರೆ ಜನಸಾಮಾನ್ಯರ ಹಿತದೃಷ್ಟಿಯಿಂದ ಡಿಸೆಂಬರ್ 2026 ರ ಒಳಗೆ ಯಾವುದೇ ಕಾರಣದಿಂದ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು” ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಸ್ಪಷ್ಟಪಡಿಸಿದ್ದಾರೆ.

ಈ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿದರೆ ಹೋತಿನಮಡು, ರಾಂಪೂರ, ಬಿರಾಳ್, ಬಿರಾಳ ಬಿ, ಮಲ್ಲಾ ಕೆ, ಮಲ್ಲಾ ಬಿ ಸೇರಿದಂತೆ ಗಡಿ ಭಾಗದ ಹತ್ತಾರು ಹಳ್ಳಿಗಳ ಜನರಿಗೆ ಮತ್ತು ರೈತರಿಗೆ ಸುಗಮ ಸಂಪರ್ಕಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಸದನದಲ್ಲಿ ಸರ್ಕಾರದ, ಸಚಿವರ ಗಮನ ಸೆಳೆದರು.