ದ್ವೇಷ ಭಾಷಣ: ಗದ್ದಲ, ಕೋಲಾಹಲ

ಬೆಳಗಾವಿ, ಡಿ. ೧೮- ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಪ್ರತಿಪಕ್ಷಗಳ ವಿರೋಧ, ಧರಣಿ, ಗದ್ದಲದ ನಡುವೆಯೇ ಅಂಗೀಕಾರ ದೊರಕಿತು.


ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧೇಯಕವನ್ನು ಪರ್ಯಾಲೋಚಿಸುವಂತೆ ಕೋರಿದ ನಂತರ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಧೇಯಕದ ಮೇಲೆ ಮಾತನಾಡುವಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕರಾವಳಿ ಪ್ರದೇಶವನ್ನು ಕುರಿತು ಬಳಸಿದ ಪದ ಸದನದಲ್ಲಿ ಕಿಚ್ಚಿಗೆ ಕಾರಣವಾಗಿ ಪ್ರತಿ ಪಕ್ಷಗಳ ಸದಸ್ಯರು ಸಚಿವ ಬೈರತಿ ಸುರೇಶ್ ವಿರುದ್ಧ ಮುಗಿಬಿದ್ದು ಅವರ ಮಾತನ್ನು ಕಡತದಿಂದ ತೆಗೆಯಬೇಕು. ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ಬಳಸಿರುವ ಪದ ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿ ಧರಣಿ ಆರಂಭಿಸಿದರು.


ಈ ಹಂತದಲ್ಲಿ ಸದನದಲ್ಲಿ ಗದ್ದಲ ಹಾಗೂ ಕೋಲಾಹಲದ ವಾತಾವರಣ ರೂಪುಗೊಂಡಿತು ಈ ಗದ್ದಲ, ಧರಣಿ ನಡುವೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಅಂಗೀಕಾರ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅಂಗೀಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.


ವಿಪಕ್ಷಗಳ ಗದ್ದಲ, ಕೂಗಾಟದ ನಡುವೆಯೇ ಸಭಾಧ್ಯಕ್ಷರು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ ಅಂಗೀಕಾರವಾಗಿದೆ ಎಂದು ಹೇಳಿ ಸದನವನ್ನು ಭೋಜನ ವಿರಾಕಮಕ್ಕೆ ಮುಂದೂಡಿದರು. ಈ ಕಾಯ್ದೆ ಬಗ್ಗೆ ಸದನದಲ್ಲಿ ಪೂರ್ಣ ಪ್ರಮಾಣದ ಚರ್ಚೆ ಆಗದೆ ತರಾತುರಿಯಲ್ಲಿ ಕಾಯ್ದೆ ಅಂಗೀಕಾರ ಪ್ರಕ್ರಿಯನ್ನು ಮುಗಿಸಿದ್ದು, ವಿಪಕ್ಷದ ಸದಸ್ಯರ ಸಿಟ್ಟಿಗೆ ಕಾರಣವಾಗಿ ಅವರುಗಳು ಆಕ್ರೋಶ ವ್ಯಕ್ತಪಡಿಸಿದರಾದರೂ
ವಿಪಕ್ಷಗಳ ಸದಸ್ಯರ ಆಕ್ರೋಶವನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಳ್ಳದೆ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸಫಲವಾಯಿತು.


ಇದಕ್ಕೂಮೊದಲು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕರ್ನಾಟಕ ದ್ವೇಷ ಬಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆಯನ್ನು ಪರ್ಯಾಲೋಚಿಸಿ ಅಂಗೀಕಾರ ನೀಡುವಂತೆ ಸದನವನ್ನು ಕೋರಿ ವಿಧೇಯಕದಲ್ಲಿನ ಆಂಶಗಳನ್ನು ಎಳೆ ಎಳೆಯಾಗಿ ಸದನದ ಮುಂದಿಟ್ಟು, ಈ ಕಾಯ್ದೆ ಅವಶ್ಯಕತೆಯನ್ನು ಪ್ರತಿಪಾದಿಸಿದರು.


ಆಗ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಕಾಯ್ದೆಯ ಅಗತ್ಯವಿಲ್ಲ. ಇದು ರಾಜಕೀಯ ದ್ವೇಷ ತೀರಿಸಿಕೊಳ್ಳಲು ತಂದಿರುವ ಕಾಯ್ದೆ. ಈ ಕಾಯ್ದೆ ಜಾರಿಯಿಂದ ಪೊಲೀಸರು, ಹಿಟ್ಲರ್‌ಗಳಾಗುತ್ತಾರೆ. ಈ ಕಾಯ್ದೆ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರಕ್ಕೆ ವಿರುದ್ಧವಾಗಿದೆ. ಈ ಕಾಯ್ದೆ ಅಗತ್ಯವಿಲ್ಲ ಎಂದು ಹೇಳಿ, ವಿರೋಧ ಪಕ್ಷಗಳನ್ನು ಮುಗಿಸಲು ಈ ಕಾಯ್ದೆಯನ್ನು ತರಲಾಗಿದೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಈ ಕಾಯ್ದೆ ತಂದಿದೆ. ಇದಕ್ಕೆ ನಮ್ಮ ವಿರೋಧ ಇದೆ. ಹೀಗಾಗಿ ಬಿಎನ್‌ಎಸ್‌ನಲ್ಲಿ ಹಲವು ಕಾನೂನುಗಳಿವೆ. ಹೀಗಿರುವಾಗ ಮತ್ತೆ ದ್ವೇಷ ಭಾಷಣ ಮತ್ತು ದ್ವೇಷ ರಾಜಕೀಯ ನಿರ್ಬಂಧಿಸಲು ಕಾನೂನು ಅಗತ್ಯವಿಲ್ಲ. ಪತ್ರಿಕಾರಂಗ ಮತ್ತು ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಈ ಕಾಯ್ದೆ ತರಲಾಗಿದೆ ಎಂದು ಟೀಕಿಸಿದರು.


ಅಧಿಕಾರದಲ್ಲಿರುವವರಿಗೆ ಈ ಕಾಯ್ದೆ ಒಂದು ಆಯುಧವಾಗಲಿದೆ. ಹೀಗಿರುವ ಕಾನೂನೇ ಸಾಕು. ಈ ಕಾನೂನು ಬೇಡ. ಪೊಲೀಸರಿಗೆ ಹಣ ವಸೂಲಿ ಮಾಡಲು, ಹಿಟ್ಲರ್‌ನಂತೆ ವರ್ತಿಸಲು ಇದು ನೆರವಾಗುತ್ತದೆ ಎಂದು ಹೇಳಿದರು


ನೂರು ಸಾರಿ ಯೋಚನೆ ಮಾಡಿ ಈ ಕಾಯ್ದೆ ತರುವುದು ಬೇಡವೆ ಬೇಡ. ಈ ಕಾಯ್ದೆಯಡಿ ಯಾರನ್ನು ಹೇಗೆ ಬೇಕಾದರು ಬಂಧಿಸಬಹುದು. ಇದಕ್ಕೆ ಹೊಸ ಜೈಲು ಬೇಕಾಗುತ್ತದೆ ಎಂದರು.


ಈ ಹಂತದಲ್ಲಿ ಸಚಿವ ಬೈರತಿ ಸುರೇಶ್ ಎದ್ದು ನಿಂತು, ಕರಾವಳಿ ಬಗ್ಗೆ ಆಡಿದ ಮಾತು ವಿಪಕ್ಷ ಸದಸ್ಯರನ್ನು ಕೆರಳಿಸಿ ವಿಪಕ್ಷ ಸದಸ್ಯರು ಸಚಿವ ಬೈರತಿಸುರೇಶ್ ಜತೆ ಜಟಾಪಟಿಗೆ ಇಳಿದರು. ಒಂದು ಹಂತದಲ್ಲಿ ಸುರೇಶ್ ಹಾಗೂ ಬಿಜೆಪಿ ಚನ್ನಬಸಪ್ಪ ನಡುವೆ ಏಕವಚನದಲ್ಲೇ ಮಾತುಗಳ ವಿನಿಮಯವೂ ಆಗಿ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತ್ತು.


ಕರಾವಳಿ ಬಗ್ಗೆ ಸಚಿವ ಸುರೇಶ್ ಆಡಿದ ಮಾತು ವಿರೋಧಿಸಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿನ ಪೀಠಕ್ಕೆ ಆಗಮಿಸಿ ಧರಣಿ ಆರಂಭಿಸುತ್ತಿದೆ. ವಿಧೇಯಕವನ್ನು ಮತಕ್ಕೆ ಹಾಕುವಾಗ ಹೇಳಿ ವಿಧೇಯಕವನ್ನು ಮತಕ್ಕೆ ಹಾಕಿ ಧ್ವನಿ ಮತದಿಂದ ಅಂಗೀಕಾರವಾಗಿದೇ ಎಂದು ಎಂದು ಪ್ರಕಟಿಸಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.


ಸಭಾಧ್ಯಕ್ಷರು ಸದನವನ್ನು ಮಂದೂಡಿದರು ವಿಪಕ್ಷ ಸದಸ್ಯರು ಮಾತ್ರ ಸದನದಲ್ಲೇ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಾ ನಿಂತಿದ್ದರು. ಈ ರೀತಿ ವಿಧೇಯಕ ಅಂಗೀಕಾರ ಮಾಡಿದ್ದು ಸರಿಯಲ್ಲ ಎಂಬ ಘೋಷಣೆಗಳನ್ನು ಕೂಗಿದರು.