
ಬೆಂಗಳೂರು,ಮಾ. ೨೧-ಕಾಳೇನಅಗ್ರಹಾರದಿಂದ ತಾವರೆಕೆರೆ ನಡುವಿನ ಪಿಂಕ್(ಗುಲಾಬಿ) ಎತ್ತರಿಸಿದ ಮೆಟ್ರೋ ಮಾರ್ಗವನ್ನು ಬರುವ ಮೇ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್( ಬಿಎಂಆರ್‌ಸಿಎಲ್) ಭರದ ಸಿದ್ಧತೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ ಏಪ್ರಿಲ್ ೫ರ ವರೆಗೆ ೧೬ ದಿನಗಳ ಕಾಲ ಆರ್ ಡಿಎಸ್ ಓ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ವೇಗ ಮತ್ತು ತೂಕ,ಹಳಿ ನಿಲ್ದಾಣಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಈ ಗುಲಾಬಿ ಮಾರ್ಗಕ್ಕೆ ಅದಾಗಲೇ ೪ ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ.
ಆ ಮೂಲಕ ಮೊದಲ ಹಂತದಲ್ಲಿ ಗುಲಾಬಿ ಮಾರ್ಗದ ೬ ಚಾಲಕರಹಿತ ರೈಲುಗಳು ಸಂಚರಿಸಲಿದ್ದು, ಕಾಳೇನಅಗ್ರಹಾರದಿಂದ ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು ೨೧.೨೫ ಕಿ.ಮೀ. ವಿಸ್ತೀರ್ಣ ಹೊಂದಿದ್ದು ೧೮ ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ ೧೨ ಅಂಡರ್ ಗೌಂಡ್ ಮತ್ತು ೬ ಎಲಿವೇಟೆಡ್ ಸ್ಟೇಷನ್‌ಗಳಾಗಿವೆ.
ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ೬ ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಕಾರ್ಯಾರಂಭ ಮಾಡಲು ಬಿಎಂಆರ್ ಸಿಎಲ್ ಸಿದ್ಧತೆ ಮಾಡಿಕೊಂಡಿದ್ದು, ಉಳಿದ ೧೩.೭೬.ಕಿ.ಮೀ ವಿಸ್ತೀರ್ಣದ ೧೨ ಅಂಡರ್ ಗೌಂಡ್ ಸ್ಟೇಷನ್ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ನಡುವೆ ಗುಲಾಬಿ( ಪಿಂಕ್) ಮೆಟ್ರೋ ಮಾರ್ಗಕ್ಕೆ ಬಿಇಎಂಎಲ್ ಸಂಸ್ಥೆಯು ತಯಾರಿಸಿರುವ ಮೂರನೇ ಚಾಲಕ ರಹಿತ ರೈಲು ಸೆಟ್ ಯಶಸ್ವಿಯಾಗಿ ಕೋತ್ತನೂರು ಡಿಪೋವನ್ನು ತಲುಪಿದೆ.
ಈ ರೈಲು ಬೋಗಿಗಳು ಗುಲಾಬಿ ಮಾರ್ಗ ಯೋಜನೆಯ ಕಾರ್ಯಗತಿಯನ್ನು ಮತ್ತಷ್ಟು ವೇಗಗೊಳಿಸಲಿವೆ. ಈಗಾಗಲೇ ಪಿಂಕ್ ಲೈನ್?ಗೆ ಎರಡು ಚಾಲಕ ರಹಿತ ರೈಲುಗಳು ಬಂದಿದ್ದು, ಅವುಗಳಲ್ಲಿ ಮೊದಲನೆಯ ರೈಲು ಸೆಟ್‌ನ ಪರೀಕ್ಷಾರ್ಥ ಸಂಚಾರ ಈಗಾಗಲೇ ಆರಂಭವಾಗಿದೆ.
ಇದು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸುವಲ್ಲಿ ಒಂದು ಪ್ರಮುಖ ಹಂತವಾಗಿದೆ. ಪಿಂಕ್ ಲೈನ್ ಮೆಟ್ರೋ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ೨೧.೨೫ ಕಿಲೋಮೀಟರ್ ದೂರವನ್ನು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಒಟ್ಟು ೧೮ ಮೆಟ್ರೋ ನಿಲ್ದಾಣಗಳು ಬರಲಿದ್ದು, ಇದರಲ್ಲಿ ೧೨ ನಿಲ್ದಾಣಗಳು ಭೂಗತವಾಗಿ ಮತ್ತು ೬ ನಿಲ್ದಾಣಗಳು ಎಲಿವೇಟೆಡ್ ಆಗಿರುತ್ತವೆ. ಮೂರನೇ ರೈಲು ಸೆಟ್‌ನ ಆಗಮನವು ಪಿಂಕ್ ಲೈನ್ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ, ಇದರಿಂದ ನಗರದ ಸಾರ್ವಜನಿಕ ಸಾರಿಗೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.






























