Home ಮುಖಪುಟ ಸುದ್ದಿ ನಾಳೆಯಿಂದ ಸರ್ಕಾರಿ ವೈದ್ಯರ ಮುಷ್ಕರ

ನಾಳೆಯಿಂದ ಸರ್ಕಾರಿ ವೈದ್ಯರ ಮುಷ್ಕರ

ಬೆಂಗಳೂರು, ಮಾ. ೧೦-ಹಲ್ಲು ನೋವು, ಜ್ವರ, ಸ್ಕಿನ್ ಅಲರ್ಜಿ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಇನ್ನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಮಾರ್ಚ್ ೧೧ರಿಂದ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಸೇವೆಗಳು ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.


ರಾಜ್ಯಾದ್ಯಂತ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಎದುರಾಗಿದೆ. ಜ್ವರ, ಕೆಮ್ಮು, ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಅವಲಂಬಿಸಿರುವ ಬಡ ರೋಗಿಗಳು ಈಗ ಆತಂಕದಲ್ಲಿದ್ದಾರೆ.


೧೫ ಪ್ರಮುಖ ಬೇಡಿಕೆಗಳು ಮುಂದಿಟ್ಟು ಹೋರಾಟ ವೈದ್ಯರು ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೃಂದ ಹಾಗೂ ನೇಮಕಾತಿ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

ಜೊತೆಗೆ ೧೩ ವರ್ಷಗಳಿಂದ ಪರಿಷ್ಕರಣೆ ಆಗದ ವೈದ್ಯರ ಜೇಷ್ಠತಾ ಪಟ್ಟಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ವೈದ್ಯಕೀಯ ಸಿಬ್ಬಂದಿ ಕೊರತೆ
ಇತ್ಯಾದಿ ಸೇರಿ ಒಟ್ಟು ೧೫ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ.


ಈ ಸಮಸ್ಯೆಗಳ ಪರಿಹಾರಕ್ಕಾಗಿ ಆರೋಗ್ಯ ಇಲಾಖೆ ಇದುವರೆಗೆ ಒಟ್ಟು ೭ ಸಭೆಗಳನ್ನು ನಡೆಸಿದೆ. ಆದರೆ ಯಾವುದೇ ಸ್ಪಷ್ಟ ಲಿಖಿತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ.


ಹಂತ ಹಂತವಾಗಿ ಮುಷ್ಕರ


ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ನೇತೃತ್ವದಲ್ಲಿ ವೈದ್ಯರು ಇಂದು ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿ ಸರ್ಕಾರಕ್ಕೆ ಹಲವು ಬಾರಿ ಮಾನವಿ ಕೊಟ್ಟಿದಿವಿ.ಅದರೆ ಎನ್ನು ಪ್ರಯೋಜನ ಅಗಿಲ್ಲ. ನಮ್ಮ ಉಳಿದಿರೋದು ಪ್ರತಿಭಟನೆ ಒಂದೇ ಅಂತ ತಿಳಿಸಿದರು..


ಕಪ್ಪು ಪಟ್ಟಿ ಧರಿಸಿ ಮುಷ್ಕರ


ಮಾರ್ಚ್ ೧೧ ರಿಂದ: ವೈದ್ಯರು ಹಾಗೂ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಓಪಿಡಿ ಸೇವೆ ಸ್ಥಗಿತ.


ಮಾರ್ಚ್ ೧೬ ರಿಂದ: ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು. ಬಡ ರೋಗಿಗಳಿಗೆ ಆತಂಕ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗಿರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವೈದ್ಯರ ಮುಷ್ಕರ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆರೋಗ್ಯ ಸೇವೆಗಳು ಅಸ್ತವ್ಯಸ್ತವಾಗುವ ಭೀತಿ ವ್ಯಕ್ತವಾಗಿದ್ದು, ಸರ್ಕಾರ ಮತ್ತು ವೈದ್ಯರ ನಡುವೆ ಶೀಘ್ರ ಪರಿಹಾರ ಕಂಡುಬರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ರಾಜ್ಯದಲ್ಲಿ ದೊಡ್ಡ ಮಟ್ಟದ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಸಜ್ಜಾಗಿದ್ದು, ಇದರ ನೇರ ಪರಿಣಾಮ ಬಡ ರೋಗಿಗಳ ಮೇಲೆಯೇ ಬೀಳುವ ಸಾಧ್ಯತೆ ಇದೆ.

ಸಿಎಂ ಸಮ್ಮುಖದಲ್ಲೇ ಸಭೆ: ದಿನೇಶ್


ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ನಾಳೆಯಿಂದ ಒಪಿಡಿ ಬಂದ್ ಮಾಡಿ ಮುಷ್ಕರ ನಡೆಸಲು ಮುಂದಾಗಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ವೈದ್ಯರ ಸಂಘದ ಪದಾಧಿಕಾರಿಗಳ ಜತೆ ಇಂದು ಸಭೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ಹೇಳಿದರು.


ಶೂನ್ಯ ವೇಳೆಯಲ್ಲಿ ಬಿಜೆಪಿಯ ಸುನೀಲ್‌ಕುಮಾರ್ ರವರು ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನಾಳೆಯಿಂದ ಒಪಿಡಿ ಮತ್ತು ತುರ್ತು ಸೇವೆಯನ್ನು ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಇಂದು ಸಂಜೆಯೊಳಗೆ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ವೈದ್ಯರ ಸಂಘದ ಪದಾಧಿಕಾರಿಗಳನ್ನು ಕರೆಸಿ ಚರ್ಚಿಸುತ್ತೇವೆ ಎಂದು ಹೇಳಿದರು.


ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಸುನೀಲ್‌ಕುಮಾರ್ ರವರು ನಾಳೆಯಿಂದ ವೈದ್ಯರು ಮುಷ್ಕರಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಸರ್ಕಾರ ವೈದ್ಯರ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದರು.