ಹಾಸನ ಜಿಲ್ಲಾ ರಾಜಕಾರಣದ ಘನತೆ ಮರುಸ್ಥಾಪಿಸುವ ಕೆಲಸ ಗೋಪಾಲಸ್ವಾಮಿರಿಂದ ಆಗಲಿ -ಕೆ.ವಿ.ಪ್ರಭಾಕರ್ ಕರೆ

ಹಾಸನ ಅ ೫: ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಬಂದು ಎಲ್ಲರ ಹೃದಯಗಳನ್ನೂ ಗೆಲ್ಲುವ ಶಕ್ತಿ ಇರುವ ಗೋಪಾಲಸ್ವಾಮಿ ಅವರು ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸವನ್ನೂ ಮಾಡಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.


ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ ೫೫ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಬ್ಬಡಿ ಪಂದ್ಯಾವಳಿ ಹಾಗೂ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಒಬ್ಬ ಕ್ರೀಡಾ ಪಟುವಿಗೆ ಇರಬೇಕಾದ ಕ್ರೀಡಾ ಮನೋಭಾವ ಮತ್ತು ಬದ್ಧತೆ ಎರಡೂ ಗೋಪಾಲಸ್ವಾಮಿ ಅವರಿಗಿದೆ. ಪ್ರತಿಯೊಬ್ಬರನ್ನೂ ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುವ ಸಜ್ಜನಿಕೆಯೇ ಗೋಪಾಲಸ್ವಾಮಿ ಅವರ ವ್ಯಕ್ತಿತ್ವದ ಶಕ್ತಿ ಎಂದರು.


ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ಮತ್ತು ಸಮಾಜದ ಘನತೆಯನ್ನು ಹೆಚ್ಚಿಸುವುದು ಉತ್ತಮ ರಾಜಕಾರಣಿಯ ಲಕ್ಷಣ. ಈ ಲಕ್ಷಣಗಳು ಗೋಪಾಲಸ್ವಾಮಿ ಅವರಲ್ಲಿವೆ.

ಹೀಗಾಗಿ ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರು ಸ್ಥಾಪಿಸುವುದು ಹಾಗೂ ಹಾಸನ ಜಿಲ್ಲೆಯ ರಾಜಕಾರಣದ ಇತಿಹಾಸ ಮತ್ತು ವರ್ತಮಾನಕ್ಕೆ ಅಂಟಿರುವ ಕಳಂಕವನ್ನು ಅಳಿಸಿ ಹಾಸನದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಶಕ್ತಿ ಗೋಪಾಲಸ್ವಾಮಿ ಮತ್ತು ಶ್ರೇಯಸ್ ಪಟೇಲ್ ಅವರುಗಳಿಗೆ ಇದೆ. ಈ ಜವಾಬ್ದಾರಿಯನ್ನು ಇಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.


ನಾನೇ ಎಂದು ಎದೆ ಎತ್ತಿ ನಿಂತ ಹೆಮ್ಮರಗಳೆಲ್ಲಾ ಜೋರು ಮಳೆಗೆ ನೆಲಕ್ಕೆ ಬೀಳುತ್ತವೆ. ಆದರೆ ಗರಿಕೆ ಹುಲ್ಲನ್ನು ಯಾವ ಮಳೆ, ಬಿರುಗಾಳಿಯೂ ಉರುಳಿಸಲು ಸಾಧ್ಯವಿಲ್ಲ. ಗೋಪಾಲಸ್ವಾಮಿ ಅವರು ಗರಿಕೆ ಹುಲ್ಲಿನಷ್ಟೇ ಸರಳ ಮತ್ತು ಸಜ್ಜನಿಕೆಯನ್ನು ರೂಢಿಸಿಕೊಂಡಿದ್ದಾರೆ ಎಂದರು.


ಕುಸುಮಾ ಹನುಮಂತರಾಯಪ್ಪ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಗೋಪಾಲಸ್ವಾಮಿ, ಹೂಡ ಅಧ್ಯಕ್ಷ ಶಿವಪ್ಪ, ಏUWಎ ಅಧ್ಯಕ್ಷರಾದ ಶಿವಾನಂದ ತಗಡೂರು ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಸಿಟಿ ಹೈಲೈಟ್ ಸಂಪಾದಕಾದ ಸುನಿಲ್, ಯುವ ಮುಖಂಡರಾದ ಕೆ.ಎಲ್.ಸುರೇಶ್,ಅರಕಲಗೋಡು ಪ್ರಸನ್ನ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಾಂಕ್, ಪತ್ರಕರ್ತ ಚಿದಾನಂದ ಪಟೇಲ್, ಬಾಲ ಭವನದ ಅಧ್ಯಕ್ಷ ನಾಯ್ಡು , ನಾರು ಮಂಡಳಿಯ ನಟರಾಜ್ ಸೇರಿ ಹಲವಾರು ಹಿರಿಯ ಮುಖಂಡರು ಉಪಸ್ಥಿತರಿದ್ದು ಗೋಪಾಲಸ್ವಾಮಿ ಅವರಿಗೆ ಶುಭ ಹಾರೈಸಿದರು.