
ಕಲಬುರಗಿ,ಸೆ.8-ತಂದೆ ತನ್ನ ಮಗಳ ಮದುವೆಗೆಂದು ಮನೆಯಲ್ಲಿ ತಂದಿರಿಸಿದ್ದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ನಂದೂರ (ಕೆ) ಗ್ರಾಮದಲ್ಲಿ ನಡೆದಿದೆ.
ಧರ್ಮಪಾಲ ರಾಠೋಡ ಎಂಬುವವರು ತಮ್ಮ ಮಗಳ ಮದುವೆಗೆಂದು ಒಂದು ತೊಲೆ ಬಂಗಾರದ ಮಂಗಳ ಸೂತ್ರ, ಒಂದು ತೊಲೆ ಬಂಗಾರದ ಬೋರಮಳ, ಅರ್ಧ ತೊಲೆಯ ಮೂಗಿನ ರಿಂಗ್ ಸೇರಿ 2 ಲಕ್ಷ ರೂ.ಮೌಲ್ಯದ 25 ಗ್ರಾಂ.ಬಂಗಾರದ ಆಭರಣ, 20 ಸಾವಿರ ರೂ.ಮೌಲ್ಯದ 3 ತೊಲೆಯ ಡೊಂಕಕ್ಕೆ ಹಾಕಿಕೊಳ್ಳುವ ಬೆಳ್ಳಿಯ ಡಾಬಾ, 3 ಲಕ್ಷ ರೂ.ನಗದು ಸೇರಿ 5.20 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯವನ್ನು ಮನೆಯ ಆಲಮರಿಯಲ್ಲಿ ತೆಗೆದು ಇರಿಸಿದ್ದರು. ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.