
ಕಲಬುರಗಿ,ಡಿ.15-ಶಹಾಬಾದ ತಾಲ್ಲೂಕಿನ ಹೊನಗುಂಟ ಗ್ರಾಮದ ಚಂದ್ರಲಾ ಪರಮೇಶ್ವರಿ ಗುಡಿ ಬೀಗ ಮುರಿದು 10 ಗ್ರಾಂ.ಬಂಗಾರದ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಂತರರಾಜ್ಯ ಕಳ್ಳನನ್ನು ಮತ್ತು ಶಹಾಬಾದ ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24.10.2025 ರಂದು ಶಹಾಬಾದ ತಾಲ್ಲೂಕಿನ ಹೊನಗುಂಟಾ ಗ್ರಾಮದ ಚಂದ್ರಲಾ ಪರಮೇಶ್ವರಿ ಗುಡಿ ಬೀಗ ಮುರಿದು 10 ಗ್ರಾಂ.ಬಂಗಾರದ ಸರ ಕಳವು ಮಾಡಿದ ಬಗ್ಗೆ ಮತ್ತು ಶಹಾಬಾದ ನಗರದಲ್ಲಿ ಪದೇ ಪದೇ ಬೈಕ್ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಈ ಎರಡೂ ಪ್ರಕರಣಗಳ ತನಿಖೆಗೆ ಎಸ್‍ಪಿ, ಹೆಚ್ಚುವರಿ ಎಸ್‍ಪಿ, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಬೀಗ ಮುರಿದು ಚಿನ್ನದ ಸರ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಪುನಾ ಜಿಲ್ಲೆಯ ಚಿರಾಗ ಅಮರ ರಾಠೋಡ್ ಎಂಬಾತನನ್ನು ಬಂಧಿಸಿ 10 ಗ್ರಾಂ.ಬಂಗಾರದ ಸರ ಮತ್ತು ಶಹಾಬಾದ ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿ 90 ಸಾವಿರ ರೂ.ಮೌಲ್ಯದ 3 ಬೈಕ್ ಸೇರಿ 1.28 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ತಿಳಿಸಿದರು.
ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಬೀಗ ಮುರಿದು ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಎರಡೂ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.
























