Home ಮುಖಪುಟ ಸುದ್ದಿ ವಿಶ್ವದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್‌ನ ’ಲೋನಿ’

ವಿಶ್ವದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್‌ನ ’ಲೋನಿ’

ಹೊಸದಿಲ್ಲಿ.ಮಾ೨೫: ವಿಶ್ವದ ವಾಯುಮಾಲಿನ್ಯದ ಕುರಿತು ಸ್ವಿಟ್ಜರ್ಲೆಂಡ್‌ನ ಐಕ್ಯೂಏರ್ ಸಂಸ್ಥೆಯು ೨೦೨೫ರ ಸಾಲಿನ ಜಾಗತಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಪಾಲಿಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಸಮೀಪದ ಲೋನಿ ಪಟ್ಟಣವು ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.


ಲೋನಿ ಮೊದಲ ಸ್ಥಾನ: ಲೋನಿಯಲ್ಲಿ ವಾರ್ಷಿಕ ಸರಾಸರಿ Pಒ೨.೫ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ ೧೧೨.೫ ಮೈಕ್ರೋಗ್ರಾಂ ದಾಖಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷಿತ ಮಿತಿಗಿಂತ ೨೨ ಪಟ್ಟು ಹೆಚ್ಚು!
ದೆಹಲಿಗೆ ನಾಲ್ಕನೇ ಸ್ಥಾನ: ದೇಶದ ರಾಜಧಾನಿ ನವದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ೪ನೇ ಸ್ಥಾನದಲ್ಲಿದೆ. ಆದರೆ, ವಿಶ್ವದ ಅತ್ಯಂತ ಕಲುಷಿತ ’ರಾಜಧಾನಿ’ ಎಂಬ ಪಟ್ಟವನ್ನು ದೆಹಲಿ ಉಳಿಸಿಕೊಂಡಿದೆ.


ಟಾಪ್ ೨೫ರಲ್ಲಿ ಏಷ್ಯಾ ರಾಷ್ಟ್ರಗಳೇ ಹೆಚ್ಚು ಎಂದು ತಿಳಿಸಿರುವ ವರದಿ, ವಿಶ್ವದ ಅತ್ಯಂತ ಕಲುಷಿತ ೨೫ ನಗರಗಳ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ನಗರಗಳೇ ತುಂಬಿಕೊಂಡಿವೆ. ಮೇಘಾಲಯದ ಬೈರ್ನಿಹತ್ ವಿಶ್ವದ ಮೂರನೇ ಅತ್ಯಂತ ಕಲುಷಿತ ನಗರವಾಗಿ ಗುರುತಿಸಿಕೊಂಡಿದೆ.

ಮಾಲಿನ್ಯಕ್ಕೆ ಕಾರಣಗಳೇನು?
ವರದಿಯ ಪ್ರಕಾರ, ಲೋನಿ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕಾ ಘಟಕಗಳು, ಇಟ್ಟಿಗೆ ಗೂಡುಗಳು ಮತ್ತು ವಾಹನಗಳ ದಟ್ಟಣೆ ಮಾಲಿನ್ಯಕ್ಕೆ ಮುಖ್ಯ ಕಾರಣ. ಜೊತೆಗೆ ಚಳಿಗಾಲದಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಸುಡುವ ಬೆಳೆ ಕಸ ಉತ್ತರ ಭಾರತದ ಗಾಳಿಯನ್ನು ಶೇ. ೬೦ ರಷ್ಟು ವಿಷಕಾರಿಯಾಗಿಸುತ್ತಿದೆ.


ವಿಶ್ವದ ಅತಿ ಹೆಚ್ಚು ಕಲುಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ೬ನೇ ಸ್ಥಾನದಲ್ಲಿದೆ. ನೆರೆಯ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ ವಾಯು ಮಾಲಿನ್ಯದ ಮಟ್ಟ ಮಿತಿಗಿಂತ ೧೩ ಪಟ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯಿಂದಾಗಿ ಕಾಡ್ಗಿಚ್ಚುಗಳು ಹೆಚ್ಚುತ್ತಿದ್ದು, ಇದು ಯುರೋಪ್ ಮತ್ತು ಅಮೆರಿಕದ ಗಾಳಿಯ ಮೇಲೆಯೂ ದುಷ್ಪರಿಣಾಮ ಬೀರಿದೆ ಎಂದು ವರದಿ ಎಚ್ಚರಿಸಿದೆ. “ಶುದ್ಧ ಗಾಳಿ ಎಂಬುದು ಇಂದು ಸಾಮಾನ್ಯ ಹಕ್ಕಾಗಿ ಉಳಿಯದೆ, ಕೇವಲ ಶ್ರೀಮಂತರ ಪಾಲಿನ ಸೌಲಭ್ಯವಾಗುತ್ತಿದೆ” ಎಂದು ಐಕ್ಯೂಏರ್ ಕಳವಳ ವ್ಯಕ್ತಪಡಿಸಿದೆ.