ಉಚಿತ ಯೋಜನೆ, ಸುಪ್ರೀಂ ಗರಂ

ನವದೆಹಲಿ.ಫೆ೧೯;ಚುನಾವಣೆ ಸಮೀಪಿಸಿದಾಗ ರಾಜ್ಯ ಸರ್ಕಾರಗಳು ಘೋಷಿಸುವ ‘ಉಚಿತ ಯೋಜನೆಗಳು’ ಹಾಗೂ ಉಚಿತ ನೇರ ಹಣ ವರ್ಗಾವಣೆ (ಡೈರೆಕ್ಟ್ ಕ್ಯಾಶ್ ಟ್ರಾನ್ಸ್‌ಫರ್) ಕುರಿತು , ಸುಪ್ರೀಂಕೋ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಇಂತಹ ‘ಫ್ರೀಬೀಸ್’ ಸಂಸ್ಕೃತಿ ದೇಶದ ದೀರ್ಘಕಾಲಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದೆ.


ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದ ನ್ಯಾಯಮೂರ್ತಿಗಳಾದ ಜೋಮಾಲ್ಯಾ ಭಗೀಚ ಹಾಗೂ ವಿಫುಲ್ ಪಾಂಚೋಗಿ ಅವರು ತಮಿಳುನಾಡು ವಿದ್ಯುತ್ ವಿತರಣೆ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.


ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ ಅತಿಯಾಗಿ ಉಚಿತ ಸೌಲಭ್ಯಗಳನ್ನು ಘೋಷಿಸುತ್ತಿರುವ ಪ್ರವೃತ್ತಿ ಕುರಿತು ಪೀಠ ಪ್ರಶ್ನೆ ಎತ್ತಿತು. “ರಾಜ್ಯ ಲಾಭಾಂಶದಲ್ಲಿದ್ದರೂ ಸಹ ಆ ಹಣವನ್ನು ರಸ್ತೆ, ಆಸ್ಪತ್ರೆ, ಶಾಲೆಗಳಂತಹ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವುದು ಅವರ ಕರ್ತವ್ಯವಲ್ಲವೇ ಅದರ ಬದಲು ಆಹಾರ, ಬಟ್ಟೆ, ವಿದ್ಯುತ್, ನೇರ ಹಣ ವರ್ಗಾವಣೆ ಹೀಗೆ ನಿರಂತರವಾಗಿ ವಿತರಣೆ ಮಾಡಿದರೆ ದೇಶದ ಅಭಿವೃದ್ಧಿಗೆ ಧಕ್ಕೆಯಾಗುವುದಿಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.


ಸಾಮಾಜಿಕ ನ್ಯಾಯದ ಅಂಗವಾಗಿ ಬಡವರು, ಹಿಂದುಳಿದವರಿಗೆ ನೆರವು ನೀಡುವುದು ರಾಜ್ಯದ ಕರ್ತವ್ಯ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿತು. ಆದರೆ “ಪಾವತಿಸಲು ಸಾಮರ್ಥ್ಯವಿರುವವರಿಗೂ ಮತ್ತು ಸಾಧ್ಯವಿಲ್ಲದವರಿಗೂ ವ್ಯತ್ಯಾಸ ಮಾಡದೆ ಉಚಿತ ಸೌಲಭ್ಯ ನೀಡುವುದು ‘ಅನುಗ್ರಹ ನೀತಿ’ಯಾಗುತ್ತದೆ. ಇದು ಆರ್ಥಿಕ ಬೆಳವಣಿಗೆಗೆ ಅನುಕೂಲಕರವಲ್ಲ” ಎಂದು ಅಭಿಪ್ರಾಯಪಟ್ಟಿತು.


“ರಾಜ್ಯಗಳು ಕೊರತೆಯಲ್ಲಿದ್ದರೂ ಸಹ ಹಣ ಹಂಚಿಕೆಯನ್ನು ಮುಂದುವರಿಸುತ್ತಿವೆ. ಆ ಹಣ ಎಲ್ಲಿಂದ ಬರುತ್ತದೆ? ಅದನ್ನು ದೀರ್ಘಕಾಲಿಕ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡಬಾರದೇ ಎಂದು ಪೀಠ ಪ್ರಶ್ನಿಸಿತು.


ನೇರ ಹಣ ವರ್ಗಾವಣೆ ಯೋಜನೆಗಳ ಕುರಿತು ಕೂಡ ಪೀಠ ಕಳವಳ ವ್ಯಕ್ತಪಡಿಸಿತು. “ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿ, ಅವರಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬೆಳೆಸುವುದು ಮುಖ್ಯ. ಎಲ್ಲವನ್ನೂ ಉಚಿತವಾಗಿ ನೀಡಿದರೆ ಜನರು ಕೆಲಸ ಮಾಡಲು ಪ್ರೇರಿತರಾಗುವುದೇ? ಎಂದು ಪ್ರಶ್ನಿಸಿತು.


ಚುನಾವಣೆಗಳಿಗೆ ಮುನ್ನ ಏಕಾಏಕಿ ಹೊಸ ಯೋಜನೆಗಳನ್ನು ಘೋಷಿಸುವ ಬಗ್ಗೆ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ, “ಇದು ರಾಷ್ಟ್ರ ನಿರ್ಮಾಣದ ಮಾರ್ಗವೇ ರಾಜಕೀಯ ನಾಯಕರು, ಪಕ್ಷಗಳು ಹಾಗೂ ನೀತಿನಿರ್ಮಾತರು ಈ ನೀತಿಗಳನ್ನು ಪುನರ್ವಿಮರ್ಶೆ ಮಾಡಬೇಕಾದ ಸಮಯ ಬಂದಿದೆ” ಎಂದು ಹೇಳಿದರು.


ಈ ವಿಚಾರಣೆ ವೇಳೆ ನ್ಯಾಯಾಲಯದ ಕಠಿಣ ಟೀಕೆಗಳು ‘ಫ್ರೀಬೀಸ್ ಸಂಸ್ಕೃತಿ’ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.