
ಬೀದರ್: ಜೂ.16:ಇಲ್ಲಿಯ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಸಂಸ್ಥಾಪನಾ ದಿನದ ಪ್ರಯುಕ್ತ ಶನಿವಾರ ನಡೆದ ಶಿಬಿರದಲ್ಲಿ 320 ಜನರ ಉಚಿತ ನೇತ್ರ ತಪಾಸಣೆ ಮಾಡಲಾಯಿತು.
157 ಆಶಾ ಕಾರ್ಯಕರ್ತೆಯರು ಹಾಗೂ ಆಟೊ ಚಾಲಕರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 58 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಯಿತು.
ಆಸ್ಪತ್ರೆಯ 57ನೇ ಸಂಸ್ಥಾಪನಾ ದಿನ, ಡಾ. ಸಾಲಿನ್ಸ್ ಹಾಗೂ ಎ.ಸಿ. ಸಾಲಿನ್ಸ್ ಅವರ ಜನ್ಮದಿನದ ನಿಮಿತ್ತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಹೇಳಿದರು.
ಆಸ್ಪತ್ರೆ ಕಳೆದ 57 ವರ್ಷಗಳಿಂದ ಜಿಲ್ಲೆಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ. ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ ಬಡವರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಮಾನವನ ಅಂಗಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣಿದ್ದರೆ ಮಾತ್ರ ಸೃಷ್ಟಿಯ ಸೌಂದರ್ಯ ನೋಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಘಟಕದ ಅಧಿಕಾರಿ ಡಾ. ಕಿರಣ ಪಾಟೀಲ ಸಸಿಗೆ ನೀರೆರೆದು ಶಿಬಿರ ಉದ್ಘಾಟಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಇರ್ಷಾದ್ ಅಲಿ ಪೈಲ್ವಾನ್, ಚಾರ್ಟೆಡ್ ಅಕೌಂಟೆಂಟ್ ಅರುಣ ಅಟ್ಟಲ್, ಶಿವಕುಮಾರ ಗುಮ್ಮಾ, ಡಾ.ವೀರೇಂದ್ರ ಪಾಟೀಲ, ಡಾ. ಹುಮೇರಾ ಖಾನಂ, ಡಾ. ಮುಕ್ತಾ, ಪುಟ್ಟರಾಜ ಬಲ್ಲೂರಕರ್ ಮತ್ತಿತರರು ಇದ್ದರು.