
ಬೆಂಗಳೂರು,ಫೆ.೧೩-ಪಿಯುಸಿ ವಿದ್ಯಾರ್ಥಿಗಳ ಜಾಲಿ ರೈಡ್, ಅತಿ ವೇಗದ ಚಾಲನೆಯಿಂದ ಭೀಕರ ಸರಣಿ ಅಪಘಾತ ಸಂಭವಿಸಿ ೭ ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.
ಎಕ್ಸ್ ಯುವಿ ೭೦೦ ಕಾರಿನಲ್ಲಿ ನಗರದ ಕಾಲೇಜೊಂದರ ೬ ಮಂದಿ ಪಿಯು ವಿದ್ಯಾರ್ಥಿಗಳು ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ನೂತನ ಹೆದ್ದಾರಿಯಲ್ಲಿ ಮುಂಜಾನೆ ೪ ರ ವೇಳೆ ವೇಗವಾಗಿ ಲಾಂಗ್ ಡ್ರೈವ್ ನಲ್ಲಿ ಬಂದು ಮೊದಲು ಗಗನ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ವೇಗವಾಗಿ ಎಕ್ಸ್ ಯುವಿ ೭೦೦ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಗುದ್ದಿ, ನಂತರ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ,ಕಾರಿನಲ್ಲಿದ್ದ ಎಲ್ಲಾ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದವು. ಆದರೆ ಅತಿವೇಗ ಮತ್ತು ಡಿಕ್ಕಿಯ ರಭಸಕ್ಕೆ ಏರ್‌ಬ್ಯಾಗ್‌ಗಳೂ ಸ್ಫೋಟಗೊಂಡು ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಗಗನ್ (೨೬) ಅಪಘಾತಕ್ಕೆ ಬಲಿಯಾಗಿದ್ದಾರೆ.ದೃಷ್ಟಿಹೀನ ತಾಯಿಗೆ ಈತನೇ ಏಕೈಕ ಆಧಾರಸ್ತಂಭವಾಗಿದ್ದ ಈತ ಸಫಲ್ ಕಂಪನಿಯನಲ್ಲಿ ಕೆಲಸ ಮಾಡುತ್ತಿದ್ದನು.
ಕಾರಿನಲ್ಲಿದ್ದ ಮೃತರ ಪೈಕಿ ಅಶ್ವಿನ್ ನಾಯರ್ (೧೭) ಯಲಹಂಕದ ಆರ್.ವಿ.ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದರೆ, ಉಳಿದ ಐವರು ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು,ಅವರನ್ನು ಅರ್ಹನ್, ಅಯನ್ ಆಲಿ ಹಾಗೂ ಭರತ್ ಎಂದು ಗುರುತಿಸಲಾಗಿದ್ದು, ಇನ್ನುಳಿದ ಇಬ್ಬರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.
ಮೃತ ಅಶ್ವಿನ್ ನಾಯರ್ ಮನೆಯವರಿಗೆ ತಿಳಿಸದೆಯೇ ಸ್ನೇಹಿತರೊಂದಿಗೆ ಕಾರಿನಲ್ಲಿ ಹೊರಹೋಗಿದ್ದ. ಮಗ ಮನೆಯಲ್ಲೇ ಮಲಗಿದ್ದಾನೆ ಎಂದು ಭಾವಿಸಿದ್ದ ತಾಯಿಗೆ ಪೊಲೀಸರ ಕರೆ ಬಂದಾಗ ವಿಷಯ ತಿಳಿದು ಅಘಾತಗೊಂಡಿದ್ದಾರೆ.
ಎಕ್ಸ್‌ಯುವಿ ಡಿಕ್ಕಿಗೆ ಕ್ಯಾಂಟರ್ ಪಲ್ಟಿಯಾಗಿದ್ದು, ಅದರ ಚಕ್ರಕ್ಕೆ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಬ್ರಿಜಾ ಕಾರು ಡಿಕ್ಕಿಯಾಗಿದೆ. ಇಡೀ ಹೆದ್ದಾರಿ ರಣರಂಗದಂತಾಗಿತ್ತು. ಕ್ಯಾಂಟರ್‌ನ ಹಿಂದಿನ ಎರಡು ಚಕ್ರಗಳು ಕ್ಯಾಂಟರ್‌ನಿಂದ ಬೇರ್ಪಟಿದ್ದವು.
ಘಟನಾ ಸ್ಥಳಕ್ಕೆ ಮತ್ತು ಹೊಸಕೋಟೆ ಶವಾಗಾರಕ್ಕೆ ಕೇಂದ್ರ ವಲಯ ಐಜಿಪಿ ಲಾಬುರಾಮ್ ಹಾಗೂ ಎಸ್ ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತಕ್ಕೆ ಅತಿವೇಗವೇ ಪ್ರಮುಖ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು,ನಸುಕಿನ ಜಾವವೇ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


























