ದೇವರನಿಂಬರಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಅಪಹರಣಕ್ಕೆ ವಿಫಲ ಯತ್ನ: ಆರೋಪಿ ಸೆರೆ

ವಿಜಯಪುರ, ಅ. 3: ಸೆಪ್ಟೆಂಬರ್ 3ರಂದು ಹಂತಕರ ಗುಂಡಿಗೆ ಬಲಿಯಾಗಿದ್ದ ದೇವರನಿಂಬರಗಿ ಗ್ರಾಮದ ಭೀಮನಗೌಡ ಬಿರಾದಾರ ಎಂಬುವರ ಅಪ್ರಾಪ್ತ ಪುತ್ರನ ಅಪಹರಣಕ್ಕೆ ಗುರುವಾರ ಸಂಜೆ ದೇವರನಿಂಬರಗಿ ಭೀಮನಗೌಡ ಬಿರಾದಾರ ತೋಟದ ನಿವಾಸದ ಬಳಿ ವಿಫಲ ಯತ್ನ ನಡೆದಿದ್ದು, ಈ ಬಗ್ಗೆ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿದೆ.
ಕಳೆದ ಸಪ್ಟೆಂಬರ್ 3 ರಂದು ದೇವರನಿಂಬರಗಿ ಗ್ರಾಮದಲ್ಲಿ ಭೀಮನಗೌಡ ಬಿರಾದಾರ ಹತ್ಯೆಗೆ ಸಂಬಂಧಿಸಿದಂತೆ ಪೆÇಲೀಸರು ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ ಗುರುವಾರ ಸಂಜೆ ಭೀಮನಗೌಡ ಅವರ ಅಪ್ರಾಪ್ತ ಪುತ್ರನ ಅಪಹರಣ ಮಾಡುವ ವಿಫಲ ಯತ್ನ ನಡೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ದೇವರನಿಂಬರಗಿ ಗ್ರಾಮದ ಹೊರ ಭಾಗದ ತೋಟದಲ್ಲಿರುವ ಭೀಮನಗೌಡ ನಿವಾಸಕ್ಕೆ ಅದೇ ಗ್ರಾಮದ ಸುನೀಲ ಎಂಬಾತ ತೆರಳಿ ಬನ್ನಿ ವಿನಿಮಯ ನೆಪದಲ್ಲಿ ಅಪ್ರಾಪ್ತ ಬಾಲಕನ ಅಪಹರಣ ಮಾಡುವ ಯತ್ನ ನಡೆಸಿದ್ದು, “ನಿನ್ನ ಅಪ್ಪನನ್ನು ನಾವೇ ಮರ್ಡರ್ ಮಾಡಿದ್ದೇವೆ. ನಿನ್ನನ್ನೂ ಮರ್ಡರ್ ಮಾಡುತ್ತೇವೆ” ಎಂದು ಅಪ್ರಾಪ್ತ ಬಾಲಕನನ್ನು ಹೆದರಿಸಿ ಅಪಹರಣ ಮಾಡಲು ಸುನೀಲ ಯತ್ನಿಸಿದ್ದಾನೆ.
ಆಗ ಅಲ್ಲೇ ಇದ್ದ ಭೀಮನಗೌಡ ಬಿರಾದಾರ ಕುಟುಂಬದವರು ಗಮನಿಸಿ ಮಗುವನ್ನು ಸುನೀಲ್ ನಿಂದ ರಕ್ಷಿಸಿದ್ದಾರೆ. ಘಟನೆ ಬಳಿಕ ಅಲ್ಲಿಂದ ಸುನೀಲ ಪರಾರಿಯಾಗಿದ್ದಾನೆ.
ಈ ಘಟನೆ ಖಂಡಿಸಿ ಚಡಚಣ ಕ್ರಾಸ್ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ರಸ್ತೆ ಮೇಲೆ ಟೈರ್ ಇಟ್ಟು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮನಗೌಡ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಸುನೀಲ್ ನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಡಚಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.