ಭಾರತದ ಮಡಿಲಿಗೆ ಏಷ್ಯಾಕಪ್ :ಪಾಕ್ ವಿರುದ್ಧ ರೋಚಕ ಜಯ, ತಿಲಕ್ ಭರ್ಜರಿ ಬ್ಯಾಟಿಂಗ್

ದುಬೈ,ಸೆ.28- ತಿಲಕ್ ವರ್ಮ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದುಬೈನಲ್ಲಿ ಇಂದು ನಡೆದ ಟಿ-20 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್ ಗಳಿಂದ ರೋಚಕ ಜಯ ದಾಖಲಿಸಿತು.
ಏಷ್ಯಾ ಕಪ್ ನಲ್ಲಿ ಸೋಲಿಲ್ಲದ ಸರದಾರನಾಗಿ ಭಾರತ ವಿಜೃಂಭಿಸಿತು.


ಪಾಕ್ ನೀಡಿದ 147 ರನ್ ಗಳ ಗುರಿಯನ್ನು ಬೆನ್ನಹತ್ತಿದ ಭಾರತ 19.4 ಓವರ್ ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 150ರನ್ ಗಳಿಸಿ ಗೆಲುವಿನ ನಗೆ ಬೀರಿತು.


ಪವರ್ ಪ್ಲೇ ಆಗುವಷ್ಟರಲ್ಲಿ ಭಾರತ 20 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.


ಅಭಿಷೇಕ್ 5, ಸೂರ್ಯಕುಮಾರ್ 1 ಹಾಗೂ ಗಿಲ್ 12 ರನ್ ಗಳಿಸಿದರು. ಈ ಹಂತದಲ್ಲಿ ತಿಲಕ್ ಸಂಜು ತಾಳ್ಮೆಯ ಆಟವಾಡಿ ರನ್ ಗಳಿಸುತ್ತಾ ಹೋದರು. ಆದರೆ ಸಂಜು 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಕಣಕ್ಕಿಳಿದ ಶಿವಂ ದುಬೆ ಹಾಗೂ ತಿಲಕ್ ಪಾಕ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು.‌ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ದುಬೆ 22 ಎಸೆತಗಳಲ್ಲಿ 33 ರನ್ ಗಳಿಸಿ ನಿರ್ಗಮಿಸಿದರು. ಇನ್ನೂ ಎರಡು ಎಸೆತ ಬಾಕಿಯಿರುವಾಗಲೇ ರಿಂಕು ಸಿಂಗ್ ಚೆಂಡನ್ನು ಬೌಂಡರಿ ಅಟ್ಟುತ್ತಿದ್ದಂತೆ, ತಂಡ ಗೆಲುವು ಸಾಧಿಸಿ ಆಟಗಾರರು ಕುಣಿದು ಕುಪ್ಪಳಿಸಿದರು.


ಫೈನಲ್ ಪಂದ್ಯದ ಹೀರೋ ಆಗಿ ವಿಜೃಂಭಿಸಿದ ತಿಲಕ್ ವರ್ಮಾ 53 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿ 69 ರನ್ ಗಳಿಸಿದರು.


ಫಹೀಮ್ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.


ಇದಕ್ಕೂ ಮುನ್ನ ಮೊದಲ ಬ್ಯಾಟ್ ಮಾಡಿದ ಪಾಕಿಸ್ತಾನ 19.1 ಓವರ್ ಗಳಲ್ಲಿ 146 ರನ್ ಗಳಗೆ ಸರ್ವಪತನ ಕಂಡಿತು.


ಸಾಹಿಬ್‌ಜಾದಾ ಫರ್ಹಾನ್ ಇವರು 38 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 57 ರನ್‌ ಬಾರಿಸಿ ವರುಣ್‌ ಚಕ್ರವರ್ತಿಗೆ ವಿಕೆಟ್‌ ಒಪ್ಪಿಸಿದರು.ಇಂಡಿಯಾದ ಸ್ಪಿನ್ ಬೌಲರ್‌ಗಳು ಭರ್ಜರಿ ಕಂ ಬ್ಯಾಕ್ ಮಾಡಿದರು. ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಸವಾಲು ಮೆಟ್ಟಿ ನಿಲ್ಲುವಲ್ಲಿ ಪಾಕ್‌ ಬ್ಯಾಟರ್‌ಗಳು ವಿಫಲರಾದರು.


ಪಾಕ್ ತಂಡದ ಮಧ್ಯಮ ಕ್ರಮಾಂಕದ ಸೈಮ್‌ ಅಯೂಬ್‌ 14 ರನ್‌ ಬಾರಿಸಿ ಔಟ್ ಆದರು. ಇನ್ನು ಆರಂಭಿಕ ಫಖರ್‌ ಜಮನ್‌ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್‌ ಬಾರಿಸಿ ವರುಣ್‌ ಚಕ್ರವರ್ತಿಗೆ ವಿಕೆಟ್‌ ಒಪ್ಪಿಸಿದರು. ಉಳಿದಂತೆ ಪಾಕ್‌ ತಂಡದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಡ ಮುಗಿಸಿದರು. ಕೊನೆಯ 10 ಓವರ್‌ಗಳಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಕುಲ್ ದೀಪ್ 4, ಬುಮ್ರಾ, ವರುಣ್ ಹಾಗೂ ಅಕ್ಷರ್ ತಲಾ ಎರಡು ವಿಕೆಟ್ ಪಡೆದರು.