ಶಾಸಕರ ಬಹಿರಂಗ ಹೇಳಿಕೆಗೆ ಪರಂ ಅಸಮಾಧಾನ

ಬೆಂಗಳೂರು, ಫೆ. ೧೩- ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಯಾರೂ ಬಹಿರಂಗವಾಗಿ ಮಾತನಾಡಬಾರದು. ಎಲ್ಲರೂ ಬಾಯಿ ಮುಚ್ಚಿಕೊಂಡಿರಿ ಎಂದು ಹೈಕಮಾಂಡ್ ಹೇಳಿದ್ದರೂ ಕೆಲ ಶಾಸಕರು ಈ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಈ ರೀತಿಯ ಹೇಳಿಕೆಗಳು ಇಲ್ಲಿಗೆ ನಿಲ್ಲಬೇಕು. ಎನಫ್ ಈಸ್ ಎನಫ್ ಎಂದಿದ್ದಾರೆ.


ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಏನು ಮಾಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಸಂದರ್ಭ ಬಂದಾಗ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನಾವುಗಳು ಈ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯತ್ತ ಗಮನಹರಿಸುವುದು ಸೂಕ್ತ ಎಂದರು.


ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಸಾರ್ವಜನಿಕವಾಗಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ದಿನವೂ ಮಾತನಾಡುವುದು ಸರಿಯಲ್ಲ. ಇದು ಸಾರ್ವಜನಿಕವಾಗಿ ಪಕ್ಷ ಹಾಗೂ ಸರ್ಕಾರದ ಮೇಲೆ ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಹಾಗಾಗಿ ಹೈಕಮಾಂಡ್ ಹೇಳಿರುವಂತೆ ಎಲ್ಲರೂ ಬಾಯಿ ಮುಚ್ಚಿಕೊಂಡು ಇರುವುದು ಒಳ್ಳೆಯದು ಎಂದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಕೆಲ ಶಾಸಕರು ಮಾತನಾಡುತ್ತಿರುವುದನ್ನು ಹೈಕಮಾಂಡ್ ಗಮನಿಸಿದೆ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಸೂಕ್ತ ಸಂದರ್ಭದಲ್ಲಿ ಕ್ರಮಗಳು ಆಗುತ್ತವೆ ಎಂದು ಅವರು ಹೇಳಿದರು.


ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಾವು ಸಹನೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸನ್ನಿವೇಶಗಳು ಹೊಸದೇನಲ್ಲ. ಹಿಂದೆ ಬಹಳಷ್ಟು ಇಂತಹ ಸಂದರ್ಭಗಳು ಬಂದಿವೆ. ಕರ್ನಾಟಕದಲ್ಲೂ ಹಿಂದೆ ಈ ರೀತಿ ನಡೆದಿದೆ. ಎಲ್ಲವನ್ನೂ ಹೈಕಮಾಂಡ್ ಸೂಕ್ತ ಸಂದರ್ಭ ನೋಡಿ ತೀರ್ಮಾನಿಸುತ್ತದೆ. ಅಲ್ಲಿಯವರೆಗೂ ನಾವೆಲ್ಲಾ ಸುಮ್ಮನಿರುವುದು ಒಳ್ಳೆಯದು ಎಂದು ಅವರು ತಿಳಿಸಿದರು.


ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು ಒಪ್ಪಿಗೆ ನೀಡಿದ್ದೇವೆ. ನ್ಯಾ. ಖುನ್ನಾ ಅವರ ಶಿಫಾರಸ್ಸಿನಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಮಗಳು ಆಗಬೇಕು. ಸುರಕ್ಷತೆ ನಮ್ಮ ಆದ್ಯತೆಯಾಗಿದೆ ಎಂದು ಗೃಹ ಸಚಿವರು ಹೇಳಿದರು.


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ೫೦ ವರ್ಷಗಳಲ್ಲಿ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಯಾವುದೇ ಅವಘಡಗಳಾಗಿಲ್ಲ. ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಆಗಿದೆ. ಮುಂದೆ ವಿಜಯೋತ್ಸವಕ್ಕೆ ಅವಕಾಶ ಕೊಡಬೇಕೆ, ಬೇಡವೇ ಎಂಬ ಬಗ್ಗೆಯೂ ತೀರ್ಮಾನ ಮಾಡುತ್ತೇವೆ. ಐಪಿಎಲ್ ಪಂದ್ಯಾವಳಿಗಳು ಉತ್ತಮವಾಗಿ ನಡೆಯಬೇಕು. ಸುರಕ್ಷತೆ ನಮ್ಮ ಆದ್ಯತೆ. ಈ ಬಾರಿ ಕಳೆದ ಬಾರಿಗಿಂತ ನಾಲ್ಕರಷ್ಟು ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುತ್ತೇವೆ ಎಂದು ಹೇಳಿದರು.


ರೌಡಿ ಬಿಕ್ಲು ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ಅವರಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಜಾಮೀನಿ ನಿರಾಕರಿಸಿತ್ತು. ಹಾಗಾಗಿ ಅವರು ಸೆರೆಂಡರ್ ಆಗಿದ್ದಾರೆ. ಸಿಐಡಿ ಪೊಲೀಸರು ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.